ADVERTISEMENT

ಮುಗಿಯುತ್ತಿದೆ ಬುಗುಡನಹಳ್ಳಿ ಕೆರೆ ನೀರು

​ಪ್ರಜಾವಾಣಿ ವಾರ್ತೆ
Published 20 ಮೇ 2021, 4:33 IST
Last Updated 20 ಮೇ 2021, 4:33 IST
ಬುಗುಡನಹಳ್ಳಿ ಕೆರೆ
ಬುಗುಡನಹಳ್ಳಿ ಕೆರೆ   

ತುಮಕೂರು: ನಗರಕ್ಕೆ ನೀರು ಪೂರೈಸುವ ಪ್ರಮುಖ ಜಲಮೂಲವಾದ ಬುಗುಡನಹಳ್ಳಿ ಕೆರೆಯಲ್ಲಿ ನೀರು ಖಾಲಿಯಾಗುತ್ತಾ ಬಂದಿದ್ದು, ಈಗ ಇರುವ ನೀರನ್ನು ಇನ್ನು ಎರಡು ವಾರಗಳ ಕಾಲ ಪೂರೈಸಬಹುದಾಗಿದೆ.

ಕೆರೆಯ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 246 ಎಂಸಿಎಫ್‌ಟಿ. ಈಗಾಗಲೇ ಬಹುತೇಕ ನೀರು ಖಾಲಿಯಾಗಿದ್ದು, 31 ಎಂಸಿಎಫ್‌ಟಿ ನೀರು ಉಳಿದಿದೆ. ಇದರಲ್ಲಿ 20ರಿಂದ 25 ಎಂಸಿಎಫ್‌ಟಿಯಷ್ಟು ನೀರು ಬಳಕೆಗೆ ಲಭ್ಯವಾಗಲಿದೆ. ಬೇಸಿಗೆಯಲ್ಲಿ ಬೇಡಿಕೆಯೂ ಹೆಚ್ಚಾಗಿದ್ದು, ಲಾಕ್‌ಡೌನ್‌ ನಿಂದ ಜನರು ಮನೆಯಲ್ಲೇ ಇರುವುದ ರಿಂದ ನೀರಿನ ಬಳಕೆಯೂ ಅಧಿಕ ವಾಗಿದೆ. ಬೇಸಿಗೆಯಲ್ಲಿ ಮೊದಲೇ ನೀರಿಗೆ ಕೊರತೆ. ಜತೆಗೆ ಬಳಕೆ ಪ್ರಮಾಣವೂ ಹೆಚ್ಚುತ್ತಲೇ ಇದ್ದು, ಮಹಾನಗರ ಪಾಲಿಕೆಗೆ ಮುಂದಿನ ದಿನಗಳಲ್ಲಿ ದೊಡ್ಡ ಸವಾಲು ಎದುರಾಗಲಿದೆ.

ಮೈದಾಳ ಕೆರೆ ಬಳಕೆ

ADVERTISEMENT

ಮೈದಾಳ ಕೆರೆಯಲ್ಲಿ ಸಂಗ್ರಹವಾಗಿದ್ದ ಮಳೆ ನೀರನ್ನು ಸಂಸ್ಕರಿಸಿ ಬಳಕೆ ಮಾಡಲು ಆರಂಭಿಸಲಾಗಿದೆ. ವಿದ್ಯಾನಗರದ ಪಂಪ್‌ಹೌಸ್‌ನಲ್ಲಿ ಸಂಸ್ಕರಿಸಿ ಐದು ವಾರ್ಡ್‌ಗಳಿಗೆ ಬಿಡಲಾಗುತ್ತಿದೆ. ಕುವೆಂಪು ನಗರ, ದೇವರಾಯಪಟ್ಟಣ, ಸಿದ್ಧಗಂಗಾ ಮಠದ ಸುತ್ತಮುತ್ತಲಿನ ಬಡಾವಣೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ಕೆರೆಯ ನೀರು ಕೆಲ ದಿನಗಳಿಗಷ್ಟೇ ಸಾಕಾಗಲಿದೆ.

ನಗರದಲ್ಲಿ 748 ಕೊಳವೆ ಬಾವಿಗಳಿದ್ದು, ಅದರಲ್ಲಿ 20ಕ್ಕೂ ಹೆಚ್ಚು ಬೋರ್‌ವೆಲ್‌ಗಳಲ್ಲಿ ನೀರು ಬತ್ತಿಹೋಗಿದ್ದು, ಸದ್ಯ ನಿತ್ಯ 50 ಲಕ್ಷ ಲೀಟರ್ ಲಭ್ಯವಾಗುತ್ತಿದೆ. ನಗರದ ಬೇಡಿಕೆಯಲ್ಲಿ ಅರ್ಧದಷ್ಟು ನೀರು ಕೊಳವೆಬಾವಿಗಳಿಂದ ಸಿಗುತ್ತಿದೆ.

ಪ್ರತಿ ವ್ಯಕ್ತಿಗೆ ದಿನಕ್ಕೆ 120 ಲೀಟರ್ ನೀರು ಕೊಡಬೇಕಿದ್ದು, ಪ್ರಸ್ತುತ ಸುಮಾರು 65 ಲೀಟರ್ ಸರಬರಾಜು ಮಾಡಲಾಗುತ್ತಿದೆ. ನಗರದಲ್ಲಿ ದಿನಕ್ಕೆ 1.6ರಿಂದ 1.7 ಎಂಸಿಎಫ್‌ಟಿ ನೀರು ಒದಗಿಸಬೇಕಿದ್ದು, ಬೇಸಿಗೆಯಲ್ಲಿ 1.5 ಎಂಸಿಎಫ್‌ಟಿಗಿಂತ ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡಲಾಗುತ್ತಿದೆ.

ಹೇಮಾವತಿ ಮೇಲೆ ಅವಲಂಬನೆ

ಬುಗುಡನಹಳ್ಳಿ ಕೆರೆಗೆ ಹೇಮಾವತಿ ಅಣೆಕಟ್ಟೆಯಿಂದ ನೀರು ಹರಿಸಲಾಗುತ್ತದೆ. ಅಣೆಕಟ್ಟೆಗೆ ನೀರು ಬಂದು, ಅಲ್ಲಿಂದ ನೀರು ಬಿಡುಗಡೆ ಮಾಡಿದರೆ ಮಾತ್ರ ಕೆರೆ ಭರ್ತಿಯಾಗುತ್ತದೆ. ಬೇರೆ ಜಲಮೂಲ ಇಲ್ಲದಿರುವುದರಿಂದ ಹೇಮಾವತಿ ನೀರಿಗಾಗಿ ಕಾಯಬೇಕಾಗಿದೆ. ಹೇಮಾವತಿ ಅಣೆಕಟ್ಟೆಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ನೀರು ಇಲ್ಲವಾಗಿದ್ದು, ಮುಂಗಾರು ಮಳೆಯಾಗಿ ನೀರು ಹರಿದು ಬಂದ ನಂತರವಷ್ಟೇ ಜಿಲ್ಲೆಗೆ ನೀರು ಬಿಡುಗಡೆ ಮಾಡಬೇಕಿದೆ.

ಮುಂಗಾರು ಮಳೆ ರಾಜ್ಯಕ್ಕೆ ಕಾಲಿಟ್ಟಿಲ್ಲ. ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸಬಹುದು ಎಂದು ಹೇಳಲಾಗುತ್ತಿದೆ. ಬೇಗ ಮಳೆ ಬಂದು ಅಣೆಕಟ್ಟೆಗೆ ನೀರು ಹರಿದು ಬಂದರೆ ನಗರದ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದು. ಮಳೆ ಬರುವುದು ತಡವಾದರೆ ನಗರದಲ್ಲಿ ಸಮಸ್ಯೆ ತೀವ್ರವಾಗಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೂ ಒಂದೆರಡು ವಾರದಲ್ಲಿ ಕೆಲ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾಗಬಹುದು ಎಂದು ಹೇಳಲಾಗುತ್ತಿದೆ.

‘ಸದ್ಯಕ್ಕೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಬುಗುಡನಹಳ್ಳಿ ಕೆರೆಯಲ್ಲೂ ನೀರು ಖಾಲಿಯಾಗುತ್ತಾ ಬಂದಿದೆ. ಮಳೆ ಬಂದರೆ ಪರಿಸ್ಥಿತಿ ಸುಧಾರಿಸಬಹುದು’ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.