ADVERTISEMENT

ಕುಣಿಗಲ್: ರೈತರಿಗೆ ಪರಿಹಾರವೂ ಇಲ್ಲ, ನೀರು ಇಲ್ಲ

ಹೇಮಾವತಿ ನಾಲೆ ನಿರ್ಮಾಣಕ್ಕೆ ಜಮೀನು ನೀಡಿ 12 ವರ್ಷ ಕಳೆದರೂ ಸಿಗದ ಪರಿಹಾರ

ಟಿ.ಎಚ್.ಗುರುಚರಣ್ ಸಿಂಗ್
Published 25 ಜುಲೈ 2023, 6:28 IST
Last Updated 25 ಜುಲೈ 2023, 6:28 IST
ಅನಿಲ್ ಕುಮಾರ್ , ರೈತ ಸಂಘದ ಕುಣಿಗಲ್ ತಾಲ್ಲೂಕು ಘಟಕದ ಅಧ್ಯಕ್ಷ
ಅನಿಲ್ ಕುಮಾರ್ , ರೈತ ಸಂಘದ ಕುಣಿಗಲ್ ತಾಲ್ಲೂಕು ಘಟಕದ ಅಧ್ಯಕ್ಷ    

ಕುಣಿಗಲ್: ತಾಲ್ಲೂಕಿನ ದೀಪಾಂಬುದಿ ಕೆರೆಗೆ ನೀರು ಹರಿಸುವ ಹೇಮಾವತಿ ನಾಲೆ ಮೂಲ ಯೋಜನೆಗೆ ಕಿತ್ತನಾಮಂಗಲ, ಕಾಡಮತ್ತಿಕೆರೆ- ಗವಿಮಠ ವ್ಯಾಪ್ತಿಯ ರೈತರು ನಾಲೆ ನಿರ್ಮಾಣಕ್ಕೆ ಜಮೀನು ನೀಡಿ 12  ವರ್ಷ ಕಳೆದಿದ್ದರೂ ನೀರು ಹರಿದಿಲ್ಲ ಮತ್ತೆ ಪರಿಹಾರವೂ ಸಿಕ್ಕಿಲ್ಲ.

ಜನರ ನೀರಾವರಿ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ತಾಲ್ಲೂಕಿನ ನೀರಾವರಿ ಸಚಿವರಾಗಿದ್ದ ಹುಚ್ಚಮಾಸ್ತಿಗೌಡ ಅವರ ದೂರದೃಷ್ಟಿಯಿಂದ ಹೇಮಾವತಿ ನಾಲಾ ಯೋಜನೆ ಜಾರಿಗೆ ಬಂದಿದೆ. ಒಟ್ಟು 240ಕಿ.ಮೀ ಉದ್ದದ ನಾಲಾ ಯೋಜನೆ ತಾಲ್ಲೂಕಿನ ದೀಪಾಂಬುದಿ ಕೆರೆ ಅಂತಿಮ ಘಟ್ಟವಾಗಿದೆ.

ಮೂಲ ಯೋಜನೆಯಲ್ಲಿದ್ದ ಜಿಲ್ಲೆಯ ಕೆಲ ತಾಲ್ಲೂಕಿನವರು ನೀರು ಪಡೆಯುತ್ತಿದ್ದರೂ ಮೂಲ ಯೋಜನೆಯಲ್ಲಿರುವ ಕುಣಿಗಲ್ ತಾಲ್ಲೂಕಿನ 200 ಕಿಮೀಯಿಂದ 240 ಕಿಮೀವರೆಗಿನ ಪ್ರದೇಶದ ಜನರು ನೀರಿನಿಂದ ವಂಚಿತರಾಗಿದ್ದಾರೆ. ಸದ್ಯಕ್ಕೆ ನಾಲಾ ಕಾಮಗಾರಿ 220ರವರೆಗೆ ಮಾತ್ರ ಪೂರ್ಣವಾಗಿದೆ. 201ಕಿ.ಮೀ ವ್ಯಾಪ್ತಿಯ ಕಿತ್ತಾನಾಮಂಗಲ ಅಮಾನಿಕೆರೆ 30 ರೈತರ 2-18ಎಕರೆ, ಕಾಡಮತ್ತಿಕೆರೆ 60 ರೈತರ 6.32 ಎಕರೆ- ಗವಿಮಠ 15 ರೈತರ 1-34 ಎಕರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ 2012ರಲ್ಲಿ ಪ್ರಾರಂಭಗೊಂಡು 2013ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ.

ADVERTISEMENT

ಭೂಸ್ವಾಧೀನ ಪರಿಹಾರಧನವಾಗಿ ₹167.65ಲಕ್ಷ ಹಣ ಬಿಡುಗಡೆಯಾಗಬೇಕಾಗಿದ್ದು, ಕೆಲವರಿಗೆ ಮಾತ್ರ ಬಿಡುಗಡೆಯಾಗಿದೆ. ಇನ್ನೂ ಬಹುತೇಕ ರೈತರಿಗೆ ಹಣ ಬಿಡುಗಡೆಯಾಗಿಲ್ಲ. ದಾಖಲೆ ಪಡೆದಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದ್ದರೂ ಪ್ರಯೋಜನವಾಗದ ಕಾರಣ 2016ರಿಂದಲೂ ರೈತ ಸಂಘದ ಪದಾಧಿಕಾರಿಗಳೊಂದಿಗೆ ಸೇರಿ ಹತ್ತು ಹಲವಾರು ಬಾರಿ ಪ್ರತಿಭಟನೆ ನಡೆದರೂ ಪ್ರಯೋಜನವಾಗದ ಕಾರಣ ರೈತರು ಈ ಭಾಗದ ಹೇಮಾವತಿ ನಾಲೆಯನ್ನು ಮುಚ್ಚಿ ಎಂದಿನಂತೆ ವ್ಯವಸಾಯ ಮಾಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಡಮತ್ತಿಕೆರೆಯ ರಾಮಣ್ಣ, ಹೇಮಾವತಿ ನಾಲಾ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಸಮರ್ಪಕವಾಗಿ ಅಧಿಕಾರಿಗಳು ನಿರ್ವಹಿಸದ ಕಾರಣ ಸಮಸ್ಯೆ ಆಗಿದೆ ಎಂದು ಆರೋಪಿಸುತ್ತಾರೆ.

 ಕಾಡಮತ್ತಿಕೆರೆ ಬಳಿ ನಾಲೆ ಮುಚ್ಚಿರುವ ರೈತರು
ಕಾಡಮತ್ತಿಕೆರೆ ರಾಮಣ್ಣ
ಅವ್ಯವಸ್ಥೆ ಗಮನಕ್ಕೆ ಬಂದಿದೆ. ಸರಿಪಡಿಸುವ ನಿಟ್ಟಿನಲ್ಲಿ ಇಲಾಖೆ ವ್ಯವಸ್ಥಿತ ಕಾರ್ಯತಂತ್ರ ರೂಪಿಸುತ್ತಿದೆ. ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ಮಾಡಬೇಕಾಗಿದ್ದ ಅಗತ್ಯ ಕಾರ್ಯ ಪ್ರಾರಂಭದ ದಿನಗಳಲ್ಲಿ ಸಮರ್ಪಕವಾಗಿ ಮಾಡಿಲ್ಲ.
ನಾಗರಾಜು ಹೇಮಾವತಿ ನಾಲಾ ವಲಯದ ಎಇಇ

ರೈತರ ಪರವಾದ ಯೋಜನೆ ಅಲ್ಲ ರೈತರ ಪರಿಹಾರಕ್ಕಾಗಿ 2017ರಿಂದಲೂ ಹೋರಾಟ ಮುಂದುವರೆದಿದೆ. ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮತ್ತು ವಿವಾದಿತ ನಾಲಾ ಪ್ರದೇಶದಲ್ಲಿ ಮಾಡಿದ ನಿರಂತರ ಪ್ರತಿಭಟನೆಯಿಂದಾಗಿ ಕೆಲವರಿಗೆ ಮಾತ್ರ ಪರಿಹಾರ ದೊರೆತ್ತಿದೆ. ಈ ಭಾಗದಲ್ಲಿ ಜೆ.ಎಂ.ಸಿ ಸರ್ವೆ ಮಾಡಿಸದೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕಚೇರಿಯಲ್ಲಿ ಮೂಲ ದಾಖಲೆಗಳೇ ಮಾಯವಾಗಿವೆ. ಭೂಸ್ವಾಧೀನ ಪ್ರಕ್ರಿಯೆ ನಡಸದೆ ಕೆಲವರ ಜಮೀನಿನಲ್ಲಿ ನಾಲೆ ನಿರ್ಮಾಣ ಮಾಡಿ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿರುವುದನ್ನು ನೋಡಿದರೆ ಇದೊಂದು ರೈತರ ಪರವಾದ ಯೋಜನೆ ಅಲ್ಲ. ಅನಿಲ್ ಕುಮಾರ್ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು  ಘಟಕದ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.