ADVERTISEMENT

ಕೆಟ್ಟು ನಿಂತ ಶುದ್ಧೀಕರಣ ಘಟಕ: ಕುಡಿಯುವ ನೀರಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 17:11 IST
Last Updated 25 ಏಪ್ರಿಲ್ 2020, 17:11 IST
ಪಾವಗಡ ತಾಲ್ಲೂಕು ಕಡಪಲಕೆರೆ ಗ್ರಾಮದಲ್ಲಿ ತಿಂಗಳಿಂದ ಶುದ್ಧೀಕರಣ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಶನಿವಾರ ಘಟಕದ ಮುಂದೆ ಆಕ್ರೋಶ ವ್ಯಕ್ತಪಡಿಸಿದರು
ಪಾವಗಡ ತಾಲ್ಲೂಕು ಕಡಪಲಕೆರೆ ಗ್ರಾಮದಲ್ಲಿ ತಿಂಗಳಿಂದ ಶುದ್ಧೀಕರಣ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಶನಿವಾರ ಘಟಕದ ಮುಂದೆ ಆಕ್ರೋಶ ವ್ಯಕ್ತಪಡಿಸಿದರು   

ಪಾವಗಡ: ತಾಲ್ಲೂಕಿನ ಕಡಪಲಕೆರೆ ಗ್ರಾಮದಲ್ಲಿ ಶುದ್ಧೀಕರಣ ಘಟಕ ಕೆಲಸ ಮಾಡದ ಕಾರಣ ಕುಡಿಯುವ ನೀರಿಗಾಗಿ ಹತ್ತಾರು ಕಿ.ಮೀ ಅಲೆದಾಡಬೇಕು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸುಮಾರು ಒಂದು ತಿಂಗಳಿಂದ ಶುದ್ಧೀಕರಣ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ. ಗೋರಸ್ ಮಾವು, ಅಚ್ಚಮ್ಮನಹಳ್ಳಿ, ಅರೆಕ್ಯಾತನಹಳ್ಳಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಿಗೆ ಹೋಗಿ ಕುಡಿಯುವ ನೀರು ತರಲಾಗುತ್ತಿತ್ತು. ಆದರೆ ಕೆಲ ದಿನಗಳ ಹಿಂದೆ ಸುತ್ತ ಮುತ್ತಲ ಗ್ರಾಮಸ್ಥರು ನೀರಿಗಾಗಿ ಗ್ರಾಮಕ್ಕೆ ಬರಬೇಡಿ. ನೀವು ಬಂದರೆ ಕೊರೊನಾ ಹರಡುತ್ತದೆ ಎಂದು ಜಗಳ ಮಾಡಿ ನೀರು ಕೊಡದೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.

ಗ್ರಾಮದಲ್ಲಿ ಇರುವ ಘಟಕ ಸಮರ್ಪಕವಾಗಿ ನೀರು ಶುದ್ಧೀಕರಿಸುವುದಿಲ್ಲ. ಕೊಳವೆ ಬಾವಿಯ ನೀರನ್ನು ನೇರವಾಗಿ ಪೂರೈಸಲಾಗುತ್ತದೆ. ಹೆಸರಿಗೆ ಮಾತ್ರ ಘಟಕ ಇದೆ. 6 ತಿಂಗಳಿಗೊಮ್ಮೆ ಘಟಕ ಕೆಟ್ಟು ಹೋಗುತ್ತದೆ. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೂ ಲಾಕ್‌ಡೌನ್ ನೆಪ ಹೇಳಿ ಸುಮ್ಮನಾಗಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ ಇದರಿಂದ ಗ್ರಾಮಸ್ಥರು ರೋಸಿ ಹೋಗಿದ್ದಾರೆ ಎಂದು ದೂರಿದರು.

ADVERTISEMENT

ತರಬೇತಿ ಕೊರತೆಯಿಂದಾಗಿ ಚಿಕ್ಕ ಪುಟ್ಟ ಸಮಸ್ಯೆಯನ್ನು ಇಲ್ಲಿನ ಸಿಬ್ಬಂದಿ ಪರಿಹರಿಸಲಾಗುವುದಿಲ್ಲ. ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿದರೂ ಪೈಪ್‌ಲೈನ್ ಅಳವಡಿಸಿಲ್ಲ. ಘಟಕದ ಮುಂಭಾಗ ಕೊಳಚೆ ನೀರು ನಿಂತು ಅದೇ ನೀರು ಮನೆಗಳಿಗೆ ಪೂರೈಕೆಯಾಗುತ್ತಿದೆ ಎಂದರು. ಗ್ರಾಮದ ಮುಖಂಡ ರಂಗಪ್ಪ, ಕೃಷ್ಣಪ್ಪ, ಪಾತಲಿಂಗಪ್ಪ, ಶ್ರೀನಿವಾಸ, ಪಾತಣ್ಣ, ಸುನಿಲ್ ಯಾದವ್, ಹೇಮಾದ್ರಿ ಯಾದವ್, ಕಡಪಲಕೆರೆ ನವೀನ್, ಮಾರುತಿ, ಸುಬ್ಬರಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.