ADVERTISEMENT

ತಿಪಟೂರು | ನೊಣವಿನಕೆರೆಯಿಂದ ತಿಪಟೂರಿಗೆ ನೀರು: ಡಿಪಿಆರ್‌ ಸಿದ್ಧ

ನಗರದ ಜನರ ಕುಡಿಯುವ ನೀರಿಗೆ ಶಾಶ್ವತ ಯೋಜನೆ: ಶಾಸಕ ಕೆ.ಷಡಕ್ಷರಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 7:51 IST
Last Updated 28 ಜುಲೈ 2025, 7:51 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತಿಪಟೂರು: ನಗರದ ಜನತೆಗೆ ದಿನದ 24 ಗಂಟೆ ಕುಡಿಯುವ ನೀರು ಒದಗಿಸಲು ನೊಣವಿನಕೆರೆ ಕೆರೆಯಿಂದ ನೀರು ತರುವ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ. ಶೀಘ್ರ ಕಾಮಗಾರಿ ಪ್ರಾರಂಭಿಸಿ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೊಣವಿನಕೆರೆ ಕೆರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆ ಬೆಳೆಯಲು ನೀರು ಕೊಟ್ಟು, ಹೆಚ್ಚುವರಿ ನೀರನ್ನು ನಗರಕ್ಕೆ ಬಳಸಿಕೊಳ್ಳಲಾಗುತ್ತದೆ. ನೊಣವಿನಕೆರೆ ಕೆರೆ ಜೊತೆಗೆ ಈಚನೂರು ಕೆರೆ ನೀರನ್ನೂ ಯೋಜನೆಗೆ ಬಳಸಿಕೊಳ್ಳಲಾಗುವುದು. ನಗರಕ್ಕೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸರ್ಕಾರದ ತಾಂತ್ರಿಕ ತಜ್ಞರ ವರದಿಯಂತೆ ಪರಿಶೀಲನೆ ನಡೆಸಿ ನೀರು ತರಲು ಸಿದ್ಧತೆ ನಡೆಸಲಾಗಿದೆ ಎಂದರು.

ADVERTISEMENT

‘ತಿಪಟೂರು ಕೆರೆಗೆ ನೀರು ಹಾಯಿಸಲೇಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರೆ ನೀರು ಹಾಯಿಸಲು ಸಿದ್ಧ. ಆದರೆ ಯಾವುದಾದರೂ ಹಾನಿಯಾದರೆ ಪೂರ್ಣ ನಾವೇ ಜವಾಬ್ದಾರರು ಎಂದು ಜನರು ಬರವಣಿಗೆ ನೀಡಿದರೆ ನಮ್ಮ ಅಭ್ಯಂತರವಿಲ್ಲ’ ಎಂದರು.

ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಮಾತನಾಡಿ, ನಗರವು ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ಕೂಡಿದ್ದು ನಿತ್ಯ ನಗರಕ್ಕೆ 140ರಿಂದ 160 ಎಂಸಿಎಫ್‌ಟಿ ನೀರು ಬೇಕಾಗಿದೆ. ಈಚನೂರು ಕೆರೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ನಗರದ ತ್ಯಾಜ್ಯವು ಅತಿವೃಷ್ಟಿಯಿಂದ ರಾಜಕಾಲುವೆಗಳ ಮೂಲಕ ಹರಿದು ಕೆರೆಗೆ ಮಿಶ್ರಣಗೊಂಡು ನೀರು ಕಲುಷಿತಗೊಂಡು,ಬಳಕೆಗೆ ಯೋಗ್ಯವಲ್ಲ ಎಂದು ವರದಿ ಬಂದ ನಂತರ ನೀರು ನಿಲ್ಲಿಸಲಾಗಿತ್ತು. ಡಿಸೆಂಬರ್‌ನಿಂದ 36 ಕೊಳವೆಬಾವಿಯಿಂದ 19 ಕಿಮೀ ಪೈಪ್‌ಲೈನ್ ಮೂಲಕ ನಗರದ ಜನತೆಗೆ ನೀರು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಿಪಟೂರು ಕೆರೆಗೆ ನೀರು ಹರಿಸುವ ಪೈಪ್‌ಲೈನ್ ಬದಲಾವಣೆ ಮಾಡಿ ನಗರದ ಜನರಿಗೆ ಸದ್ಯ ಹೇಮಾವತಿ ನಾಲೆಯಿಂದ ನೇರವಾಗಿ ಜಾಕ್‌ವೆಲ್ ಮೂಲಕ ನೀರು ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಈಚನೂರು ಕೆರೆಯ ಕಲುಷಿತ ನೀರನ್ನು ನೀಡುತ್ತಿಲ್ಲ. ನಾಲೆಯಿಂದ ಈಚನೂರು ಕೆರೆಗೆ ನೀರು ಹರಿಸಲಾಗುತ್ತಿದೆ ಎಂದರು.

ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ದೊಡ್ಡಯ್ಯ, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.