ADVERTISEMENT

ಹಿರೇಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ನೀರು: ಜಗದೀಶ್ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 30 ಮೇ 2020, 16:03 IST
Last Updated 30 ಮೇ 2020, 16:03 IST
ಕಾಮಗಾರಿಗೆ ಸಚಿವ ಜಗದೀಶ ಶೆಟ್ಟರ್ ಶಂಕುಸ್ಥಾಪನೆ ನೆರವೇರಿಸಿದರು
ಕಾಮಗಾರಿಗೆ ಸಚಿವ ಜಗದೀಶ ಶೆಟ್ಟರ್ ಶಂಕುಸ್ಥಾಪನೆ ನೆರವೇರಿಸಿದರು   

ತುಮಕೂರು: ಹಿರೇಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಕಾಮಗಾರಿಗೆ ಹೊನ್ನೇನಹಳ್ಳಿ ಕೆರೆ ಬಳಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.

ಹಿರೇಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಮೊದಲಿಗೆ ಹೇಮಾವತಿ ನಾಲೆಯಿಂದ ಹೊನ್ನೇನಹಳ್ಳಿ ಕೆರೆಗೆ ನೀರು ತುಂಬಿಸಲಾಗುತ್ತದೆ. ನಂತರ ದೇವರಾಯಪಟ್ಟಣ ಮತ್ತು ಮೈದಾಳ ಕೆರೆಗೆ ನೀರು ಹರಿಸಲಾಗುತ್ತದೆ. ಒಟ್ಟು 15 ಎಂಎಲ್‌ಡಿ ನೀರು ಸರಬರಾಜು ಯೋಜನೆ ರೂಪಿಸಲಾಗಿದೆ.

‘ಈ ಯೋಜನೆಯ ಮೊದಲನೇ ಹಂತದಲ್ಲಿ ಹೊನ್ನೇನಹಳ್ಳಿ ಕೆರೆ ಅಭಿವೃದ್ಧಿ, ಇನ್‌ಟೆಕ್‌ ವೆಲ್‌, ಪಂಪ್‌ಹೌಸ್‌, ಜಾಕ್‌ವೆಲ್‌, ಲಭ್ಯವಿರುವ ಎಂ.ಎಸ್‌. ಪೈಪುಗಳ ಅಳವಡಿಕೆ ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು’ ಎಂದು ಜಗದೀಶ ಶೆಟ್ಟರ್ ತಿಳಿಸಿದರು.

ADVERTISEMENT

ಹಿರೇಹಳ್ಳಿ ಕೈಗಾರಿಕಾ ಪ್ರದೇಶಕ್ಕೆ 5 ಎಂಎಲ್‌ಡಿ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ. ₹ 27.50 ಕೋಟಿ ವೆಚ್ಚದ ಈ ಕಾಮಗಾರಿಗೆ ಟೆಂಡರ್ ಪೂರ್ಣಗೊಂಡಿದೆ. ಇದರಿಂದಾಗಿ ಈ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ಧಲಿಂಗ ಸ್ವಾಮೀಜಿ, ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್‌.ಬಸವರಾಜ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌, ಡಿ.ಸಿ.ಗೌರಿಶಂಕರ್‌, ಎಚ್‌.ಡಿ.ರಂಗನಾಥ್‌, ಮಸಾಲ ಜಯರಾಂ, ವೀರಭದ್ರಯ್ಯ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಇದ್ದರು.

ಆರ್ಥಿಕ ಚಟುವಟಿಕೆ ಪೆಟ್ಟು: ಕೊರೊನಾ ನಡುವೆಯೇ ದಿನನಿತ್ಯದ ಚಟುವಟಿಕೆಗಳನ್ನು ಎದುರಿಸಬೇಕಾಗಿದೆ. ಬೇರೆ ರಾಷ್ಟ್ರಗಳಲ್ಲಿ ಸೋಂಕಿತರು, ಮೃತಪಟ್ಟವರು, ಗುಣಮುಖರಾದವರ ಸಂಖ್ಯೆಯನ್ನು ನೋಡಿದರೆ ನಮ್ಮ ದೇಶ ಮತ್ತು ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿ ಇದೆ ಎಂದು ಜಗದೀಶ್ ಶೆಟ್ಟರ್ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರಿಗೆ ತಿಳಿಸಿದರು.

ಆರ್ಥಿಕ ಚಟುವಟಿಕೆಗಳು ಬಿದ್ದಿವೆ. ಲಾಕ್‌ಡೌನ್ ಹಿಂತೆಗೆಯುವುದರಿಂದ ಎಲ್ಲ ವರ್ಗದ ಜನರಿಗೂ ಅನುಕೂಲವಾಗಲಿದೆ. ಲಾಕ್‌ಡೌನ್ ಸಡಿಲಿಸದಿದ್ದರೆ ಕಾರ್ಮಿಕರಿಗೆ ಕೆಲಸ ದೊರೆಯುವುದಿಲ್ಲ. ಈಗ ನಾವೇ ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಬಹಿರಂಗ ಚರ್ಚೆ ಇಲ್ಲ

‘ಪಕ್ಷದ ಆಂತರಿಕ ಸಮಸ್ಯೆಗಳನ್ನು ಕುಳಿತು ಪರಿಹರಿಸಿಕೊಳ್ಳಲಾಗುವುದು. ಬಹಿರಂಗ ಚರ್ಚೆಯ ಅವಶ್ಯಕತೆ ಇಲ್ಲ. ಯಾವುದೇ ಸಮಸ್ಯೆಗಳು ಇದ್ದರೂ ನೇರವಾಗಿ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರ ಜತೆ ಚರ್ಚಿಸಿ ಪರಿಹರಿಸಿಕೊಳ್ಳಲಾಗುವುದು’ ಎಂದು ಜಗದೀಶ ಶೆಟ್ಟರ್ ತಿಳಿಸಿದರು.

‘ನಾಯಕತ್ವ ಬದಲಾವಣೆಯ ಯಾವ ವಿಚಾರಗಳೂ ಇಲ್ಲ. ಯಾರೂ ಈ ಬಗ್ಗೆ ಮಾತನಾಡಿಲ್ಲ. ನಾವೆಲ್ಲ ಊಟಕ್ಕೆ ಸೇರಿದ್ದೆವು ಎಂದು ಉಮೇಶ್ ಕತ್ತಿ ಅವರೇ ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.