ADVERTISEMENT

‘ಜಿ.ಪಂ ಅಧ್ಯಕ್ಷ ಸ್ಥಾನ ಯಾದವರಿಗೆ ಬಿಟ್ಟುಕೊಡಿ’

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 16:51 IST
Last Updated 12 ಆಗಸ್ಟ್ 2020, 16:51 IST

ತುಮಕೂರು: ಒಪ್ಪಂದದ ಅನುಸಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಯಾದವ ಸಮುದಾಯಕ್ಕೆ ಬಿಟ್ಟುಕೊಡಬೇಕು ಎಂದು ಜಿಲ್ಲಾ ಗೊಲ್ಲರ (ಯಾದವ) ಸಂಘ ಒತ್ತಾಯಿಸಿದೆ.

‘ಅಧ್ಯಕ್ಷ ಸ್ಥಾನವು ಬಿಸಿಎಂ ‘ಎ’ ವರ್ಗಕ್ಕೆ ಮೀಸಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಅಧಿಕಾರ ಹಂಚಿಕೊಂಡಿವೆ. ಆರಂಭದ ಎರಡೂವರೆ ವರ್ಷ ಜೆಡಿಎಸ್‌ ಹಾಗೂ ಉಳಿದ ಅವಧಿಗೆ ಬಿಜೆಪಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಿತ್ತು. ಇದರಿಂದ ಯಾದವ ಸಮುದಾಯದವರು ಅಧ್ಯಕ್ಷರಾಗುವ ಅವಕಾಶ ಇದೆ. ಆದರೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡದೆ ಸಮುದಾಯಕ್ಕೆ ಅನ್ಯಾಯ ಎಸಗಲಾಗಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಎರಡೂ ಪಕ್ಷಗಳ ನಾಯಕರು ಈ ಸಂಬಂಧ ಹಲವು ಬಾರಿ ಸಭೆ ಸೇರಿದ್ದಾರೆ. ಆದರೆ ಒಬ್ಬರ ಮೇಲೆ ಒಬ್ಬರು ಬೆರಳು ಮಾಡುತ್ತ ಅಧ್ಯಕ್ಷ ಸ್ಥಾನವನ್ನು ಸಮುದಾಯಕ್ಕೆ ನೀಡದಿರುವುದನ್ನು ಸಂಘ ಖಂಡಿಸುತ್ತದೆ ಎಂದರು.

ADVERTISEMENT

ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಯಾದವ ಸಮಾಜದವರು ನಿರ್ಣಾಯಕರಾಗಿದ್ದಾರೆ. ಜನಾಂಗದ ಭಾವನೆಗಳನ್ನು ಗೌರವಿಸಿ ಎರಡೂ ಪಕ್ಷಗಳ ನಾಯಕರು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ನಿರ್ಲಕ್ಷ್ಯ ಭಾವನೆ ಮುಂದುವರಿಸಿದರೆ ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಯಾವ ಪಕ್ಷವನ್ನೂ ಬೆಂಬಲಿಸದೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಮುಖಂಡರಾದ ಸಣ್ಣಮುದ್ದಯ್ಯ, ಸತೀಶ್ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.