ADVERTISEMENT

ಯಗಚಿಹಳ್ಳಿ: ಕಲಿಕಾ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 5:05 IST
Last Updated 31 ಜನವರಿ 2023, 5:05 IST
ಹುಳಿಯಾರು ಹೋಬಳಿಯ ಯಗಚಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಾಣಧಾಳು ಕ್ಲಸ್ಟರ್‌ ವ್ಯಾಪ್ತಿಯ ಕಲಿಕಾ ಹಬ್ಬದ ಅಂಗವಾಗಿ ಮೆರವಣಿಗೆ ನಡೆಯಿತು
ಹುಳಿಯಾರು ಹೋಬಳಿಯ ಯಗಚಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಾಣಧಾಳು ಕ್ಲಸ್ಟರ್‌ ವ್ಯಾಪ್ತಿಯ ಕಲಿಕಾ ಹಬ್ಬದ ಅಂಗವಾಗಿ ಮೆರವಣಿಗೆ ನಡೆಯಿತು   

ಹುಳಿಯಾರು: ಹೋಬಳಿಯ ಯಗಚಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆರಂಭಗೊಂಡ ಗಾಣಧಾಳು ಕ್ಲಸ್ಟರ್‌ ವ್ಯಾಪ್ತಿಯ ಕಲಿಕಾ ಹಬ್ಬ ಅದ್ದೂರಿಯಾಗಿ ನಡೆಯಿತು.

ಕ್ಲಸ್ಟರ್‌ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ಕಲಾ ತಂಡಗಳನ್ನು ಗ್ರಾಮದ ಆಂಜನೇಯ ಸ್ವಾಮಿ ದೇಗುಲದ ಬಳಿ ಕರೆ ತಂದು ದೇವರಿಗೆ ಪೂಜೆ ಸಲ್ಲಿಸಲಾಯಿತು. ದೇಗುಲದ ಮುಂಭಾಗ ಹುಲಿ ವೇಷ ಕುಣಿತ, ಕೋಲಾಟ, ಸೋಮನ ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಮಕ್ಕಳು ಪ್ರದರ್ಶಿಸಿದರು.

ನಂತರ ಸಂತರು ಹಾಗೂ ರಾಷ್ಟ್ರ ನಾಯಕರ ವೇಷ ತೊಟ್ಟಿದ್ದ ಮಕ್ಕಳನ್ನು ಎತ್ತಿನಗಾಡಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಳವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ADVERTISEMENT

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಪರಶಿವಮೂರ್ತಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚಿಸಲು ಸರ್ಕಾರ ಕಲಿಕಾ ಹಬ್ಬ ಆಯೋಜಿಸಿದೆ. ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂದರು.

ಕಾರ್ಯಕ್ರಮದ ನೋಡಲ್‌ ಅಧಿಕಾರಿ ತಿಪ್ಪೇಶ್‌ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಕೊರೊನಾ ಸಂಕಷ್ಟದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ. ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೆ ಇತರೆ ಕ್ಷೇತ್ರಗಳಲ್ಲಿಯೂ ಹಿನ್ನಡೆಯಾಗಿದೆ ಎಂದು ತಿಳಿಸಿದರು.

ಯಗಚಿಹಳ್ಳಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಕಾಂತ್‌ ಕಾರ್ಯಕ್ರಮ ಉದ್ಘಾಟಿಸಿದರು. ಗಾಣಧಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆವಹಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬಾಪೂ ಗಿರೀಶ್‌, ಮುಖಂಡರಾದ ಆರ್. ಸದಾನಂದ, ವೈ.ಎಂ. ರಾಮಣ್ಣ, ದಸ್ತಗೀರ್‌, ವೈ.ಆರ್. ಧನಂಜಯ, ಮಂಜುನಾಥ್‌, ಯಗಚಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್. ರಾಮಸ್ವಾಮಿ, ಕಾರ್ಯದರ್ಶಿ ನಾಗಲಿಂಗಪ್ಪ, ಸಹಕಾರ ಸಂಘದ ಈರಸಿದ್ದಯ್ಯ, ಸಿಆರ್‌ಪಿಗಳಾದ ರೋಹಿಯಾ ಖಾನಂ, ಜಿ.ಕೆ. ಲೋಕೇಶ್‌, ಬೋರನಕಣಿವೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಮೇಶ್‌, ಗುರುವಾಪುರ ಪ್ರೌಢಶಾಲೆಯ ಮುಖ್ಯಶಿಕ್ಷಕ ಯೋಗೀಶ್‌, ಯಗಚಿಹಳ್ಳಿ ಶಾಲೆಯ ಮುಖ್ಯಶಿಕ್ಷಕ ಶಿವಣ್ಣ, ಕಂಪನಹಳ್ಳಿ ಶಾಲೆ ಮುಖ್ಯಶಿಕ್ಷಕ ಚಂದ್ರಯ್ಯ, ಲ.ಪು. ಕರಿಯಪ್ಪ, ಅಜಯ್‌ಕುಮಾರ್‌ ಹಾಜರಿದ್ದರು.

ಜಿಲ್ಲಾಮಟ್ಟದ ಬಾಲವಿಜ್ಞಾನಿಗಳಾಗಿ ಆಯ್ಕೆಯಾಗಿರುವ ಯಗಚಿಹಳ್ಳಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯರಾದ ಪ್ರಕೃತಿ, ಪ್ರಿಯ, ಸೃಜನಾ ಹಾಗೂ ಹರ್ಷಿತಾ ಅವರನ್ನು ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.