ADVERTISEMENT

ಕಣ್ಮರೆಯಾಗುತ್ತಿದೆ ಹೊಲದ ಅಚ್ಚು ಪೂಜೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 3:33 IST
Last Updated 5 ಡಿಸೆಂಬರ್ 2020, 3:33 IST
ಕುಣಿಗಲ್ ತಾಲ್ಲೂಕಿನ ಪುಟ್ಟಯ್ಯನಪಾಳ್ಯ ದಲ್ಲಿ ಹೊಲದ ಅಚ್ಚು ಪೂಜೆ ಮಾಡುತ್ತಿರುವ ನಟರಾಜು
ಕುಣಿಗಲ್ ತಾಲ್ಲೂಕಿನ ಪುಟ್ಟಯ್ಯನಪಾಳ್ಯ ದಲ್ಲಿ ಹೊಲದ ಅಚ್ಚು ಪೂಜೆ ಮಾಡುತ್ತಿರುವ ನಟರಾಜು   

ಕುಣಿಗಲ್: ರೈತರು ಶ್ರಮವಹಿಸಿ ಬೆಳೆದ ಬೆಳೆಗಳನ್ನು ಕಟಾವು ಮಾಡುವ ಮೊದಲು ಆಚರಿಸುತ್ತಿದ್ದ ಹೊಲದ ಅಚ್ಚು ಪೂಜೆ ಇತ್ತೀಚೆಗೆ ಕಣ್ಮರೆಯಾಗುತ್ತಿದೆ.

ಬೆಳೆಗಳ ಕಟಾವಿಗೆ ಮುನ್ನ ಗ್ರಾಮೀಣ ಪ್ರದೇಶದಲ್ಲಿ ಹೊಲದ ಮುನಿಯಪ್ಪನ ಪೂಜೆ, ರಾಶಿ ಪೂಜೆ, ಹಾಲು ಎರೆಯುವ ಪೂಜೆಗಳು ನಡೆಯುತ್ತಿತ್ತು. ರೈತ ತನ್ನ ಶ್ರಮಕ್ಕೆ ಭೂಮಿ ತಾಯಿ ನೀಡಿದ ಫಲವನ್ನು ನೆನೆಯುವುದೇ ಇದರ ಪ್ರಮುಖ ಉದ್ದೇಶವಾಗಿತ್ತು.

ಹೊಲದ ಅಚ್ಚು ಪೂಜೆ ಆಚರಿಸಿ ವಿವರ ನೀಡಿದ ಹುತ್ರಿದುರ್ಗ ಹೋಬಳಿಯ ಪುಟ್ಟಯ್ಯನಪಾಳ್ಯದ ರವಿಕುಮಾರ್– ಚಂದ್ರಿಕಾ ದಂಪತಿ, ‘ಎರಡು ಎಕರೆ ಜಮೀನಿನಲ್ಲಿ ರಾಗಿ ಸಂವೃದ್ಧಿಯಾಗಿ ಬೆಳೆದಿದೆ. ಕಟಾವಿಗೆ ಮುನ್ನಾ ದಿನ ಸಂಜೆ ಕೆಲ ರಾಗಿ ಪೈರುಗಳನ್ನು ಹೊಲದ ಮುಂಭಾಗದಲ್ಲಿ ಹರಡಿ, ತ್ರಿಮೂರ್ತಿ ಸ್ವರೂಪದ ಮೂರು ಕಲ್ಲುಗಳನ್ನು ಪ್ರತಿಷ್ಠಾಪಿಸಿ, ಕುಡುಗೋಲು ಮತ್ತಿತರ ಸಾಮಗ್ರಿಗಳನ್ನಿಟ್ಟು ಉತ್ತರಾಣಿ, ಅಣ್ಣೆ ಮತ್ತು ಹುಚ್ಚೇಳು ಹೂವುಗಳಿಂದ ಅಲಂಕರಿಸುತ್ತೇವೆ. ಮೊಸರನ್ನ ನೈವೇಧ್ಯ ಮಾಡಿ, ಭೂಮಿತಾಯಿಗೆ ಧನ್ಯವಾದ ಅರ್ಪಿಸಿ ನಂತರ ಬೆಳೆ ಕಟಾವು ಮಾಡುತ್ತೇವೆ’ ಎಂದು ತಿಳಿಸಿದರು.

ADVERTISEMENT

ಗ್ರಾಮೀಣ ಪ್ರದೇಶದಲ್ಲಿ ರೈತರ ಜೀವನಾಡಿಯಾದ ಭೂಮಿ, ಮಣ್ಣು ಮತ್ತು ನೀರನ್ನು ಪೂಜೆಯ ಮೂಲಕ ಸ್ಮರಿಸುವ ಪದ್ಧತಿಗಳಿಗೆ ವೈಜ್ಞಾನಿಕ ಕಾರಣಗಳಿವೆ. ಅವುಗಳನ್ನು ಅರಿತು ನಿರಂತರವಾಗಿ ಆಚರಿಸಬೇಕಿದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ.

ಗ್ರಾಮೀಣ ಪ್ರದೇಶದ ಕೃಷಿ ಸಂಬಂಧಿಸಿದ ಆಚರಣೆಗಳನ್ನು ಯುವ ಪೀಳಿಗೆ ಅರಿತು ಆಚರಿಸಬೇಕಿದೆ ಎನ್ನುತ್ತಾರೆ ಕುರುಪಾಳ್ಯದ ಮಂಜುಳಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.