ADVERTISEMENT

ಅನುದಾನದಲ್ಲಿ ಅವ್ಯವಹಾರ- ನಾಯಕ

ಲೋಕಾಯುಕ್ತ, ರಾಜ್ಯಪಾಲರಿಗೆ ದೂರು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:29 IST
Last Updated 6 ಏಪ್ರಿಲ್ 2013, 6:29 IST

ಕಾರವಾರ: `ನಗರೋತ್ಥಾನ ಯೋಜನೆ- 2ನೇ ಹಂತದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂರು ನಗರಸಭೆ, ಎರಡು ಪಟ್ಟಣ ಪಂಚಾಯ್ತಿ ಹಾಗೂ ಮೂರು ಪುರಸಭೆಗೆ ಸರ್ಕಾರ ಒಟ್ಟು ನೂರು ಕೋಟಿ ರೂಪಾಯಿ ಮಂಜೂರು ಮಾಡಿದ್ದು ಕಾಮಗಾರಿ ಟೆಂಡರ್ ನೀಡುವಲ್ಲಿ ಅವ್ಯಹಾರ ನಡೆದಿದೆ' ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಕಾರವಾರ ನಗರಸಭೆಗೆ ರೂ. 30 ಕೋಟಿ, ದಾಂಡೇಲಿ ಮತ್ತು ಶಿರಸಿಗೆ ತಲಾ 15 ಕೋಟಿ, ಭಟ್ಕಳ ಮತ್ತು ಕುಮಟಾ ಪುರಸಭೆಗೆ ತಲಾ ಐದು, ಅಂಕೋಲಾ, ಹೊನ್ನಾವರ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಮತ್ತು ಹಳಿಯಾಳ ಪ.ಪಂ.ಗೆ ತಲಾ ಐದು ಕೋಟಿ ಅನುದಾನ ಮಂಜೂರಾಗಿದೆ ಎಂದರು.

`ಅನುದಾನ ಬಿಡುಗಡೆ ಮಾಡಿರುವುದಕ್ಕೆ ಯಾವುದೇ ತಕಾರರು ಇಲ್ಲ. ಆದರೆ ಆಯಾ ನಗರ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳಿಗೆ ಸ್ಥಳೀಯವಾಗಿ ಟೆಂಡರ್ ಕರೆಯಬೇಕಿತ್ತು. ಆದರೆ, ನಿಯಮಗಳನ್ನು ಉಲ್ಲಂಘಿಸುವ ಸರ್ಕಾರ ಸಂಪುಟದ ವಿಶೇಷ ಅನುಮೋದನೆ ಪಡೆದು ಹೈದರಾಬಾದ್ ಮೂಲಕ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಸರ್ಕಾರ ತರಾತುರಿಯಲ್ಲಿ ಅನುದಾನ ಬಿಡುಗಡೆ ಮಾಡಿರುವುದು ಹಾಗೂ ಯಾರಿಗೂ ಗೊತ್ತಿಲ್ಲದೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿರುವುದು ನೋಡಿದರೆ ಇಲ್ಲಿ ಅವ್ಯವಹಾರ ನಡೆದಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಕುರಿತು ತನಿಖೆಗೆ ನಡೆಸಲು ಲೋಕಾಯುಕ್ತ ಮತ್ತು ರಾಜ್ಯಪಾಲರಿಗೆ ದೂರು ನೀಡಲಾಗುವುದು' ಎಂದು ನಾಯಕ ಹೇಳಿದರು.

`ಕಾಮಗಾರಿ ಪಡೆಯಲು ಟೆಂಡರ್ ಹಾಕುವ ಗುತ್ತಿಗೆದಾರರು ಟೆಂಡರ್ ಮೊತ್ತಕ್ಕಿಂತ ಕಡಿಮೆ ಮೊತ್ತ ನಮೂದಿಸುವುದು ಸಾಮನ್ಯ. ಜಿಲ್ಲೆಯಲ್ಲಿ ಕೈಗೊಳ್ಳಬೇಕಾಗಿರುವ ಕಾಮಗಾರಿ ಪಡೆಯಲು ಟೆಂಡರ್ ಹಾಕಿರುವ ಹೈದರಾಬಾದ್ ಮೂಲದ ಕಂಪೆನಿ ಟೆಂಡರ್ ಮೊತ್ತಕ್ಕಿಂತ ಶೇ 43.86ರಷ್ಟು ಹೆಚ್ಚು ಮೊತ್ತವನ್ನು ನಮೂದಿಸಿದೆ. ಇಷ್ಟಿದ್ದರೂ ಅವರಿಗೇ ಟೆಂಡರ್ ನೀಡಲಾಗಿದೆ' ಎಂದರು.

ನಗರಸಭೆ ಸದಸ್ಯ ಸಂದೀಪ ತಳೇಕರ್ ಮಾತನಾಡಿ, ಸಂಪುಟದ ವಿಶೇಷ ಅನುಮೋದನೆ ಪಡೆದು ಟೆಂಡರ್ ನೀಡಿರುವುದನ್ನು ಒಪ್ಪಿಕೊಳ್ಳಬಹುದು. ಆದರೆ ನಗರಸಭೆ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ  ಕ್ರಿಯಾಯೋಜನೆ ಸಿದ್ಧಪಡಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ವಕೀಲ ಕೆ.ಆರ್.ದೇಸಾಯಿ, ವೇದಿಕೆ ಸದಸ್ಯ ಬಾಬು ನಾಯ್ಕ, ಸಂತೋಷ ಮಾಳ್ಸೇಕರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಕರ್ತವ್ಯ ಲೋಪ:  ಪಿಡಿಒ ಅಮಾನತು
ಕಾರವಾರ:
ಕರ್ತವ್ಯಲೋಪದ ಹಿನ್ನೆಲೆ ಯಲ್ಲಿ ಅಂಕೋಲಾ ತಾಲ್ಲೂಕಿನ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ಮಿಥಿನಾ ನಾಯಕ್ ಅವರನ್ನು ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಕೆ.ಸುಬ್ರಾಯ ಕಾಮತ್ ಅಮಾ ನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪಿಡಿಒ ನಾಯಕ್ ಅವರು ಮೇಲಾ ಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಕಚೇರಿ ಕಾರ್ಯಗಳಿಗೆ ಗೈರಾಗಿದ್ದು, ಮೇಲಾಧಿಕಾರಿಗಳ ಸಂಪರ್ಕಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ಇವರ ವರ್ತನೆ ಕರ್ನಾಟಕ ನಾಗರಿಕ ಸೇವಾ ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ ನಿಯಮ 1957ರ ವಿರುದ್ಧವಾಗಿದ್ದು, ಅವರನ್ನು ತಕ್ಷಣ ದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಅಮಾನತು ಅವಧಿಯಲ್ಲಿ ಅವರು ನಿಯಮಾನುಸಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ.ಈ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ  ಇಲ್ಲದೆ ಕೇಂದ್ರಸ್ಥಾನ   ಬಿಡಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.