ADVERTISEMENT

ಅಪೌಷ್ಟಿಕತೆ ಪತ್ತೆಗೆ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 8:30 IST
Last Updated 4 ಜುಲೈ 2012, 8:30 IST

ಉಡುಪಿ: `ಅಂಗನವಾಡಿಯಿಂದ ಹೊರಗುಳಿದವರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಯೇ ಎಂಬುದರ ಬಗ್ಗೆ ಜು. 8 ರಿಂದ 15 ರವರೆಗೆ ಮಾಹಿತಿ ಸಂಗ್ರಹಿಸಲಾಗುತ್ತದೆ~ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಬಾಯರಿ ಹೇಳಿದರು.

`ಹೈಕೋರ್ಟ್ ಆದೇಶದಂತೆ ಎಲ್ಲ ಅಂಗನವಾಡಿ ಮಕ್ಕಳನ್ನು ತೂಕ ಮಾಡಿ ವರದಿ ನೀಡಲಾಗಿತ್ತು. ಆದರೆ ಅಂಗನವಾಡಿಯಿಂದ ಹೊರಗೆ ಉಳಿದಿರುವ ಮಕ್ಕಳ ಬಗ್ಗೆಯೂ ಸಂಪೂರ್ಣ ಮಾಹಿತಿ ನೀಡುವಂತೆ ನ್ಯಾಯಾಲಯ ನಿರ್ದೇಶ ನೀಡಿದೆ. ಆದ್ದರಿಂದ ಎಲ್ಲ ಮಕ್ಕಳನ್ನೂ ತೂಕ ಮಾಡಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಯೇ ಆರೋಗ್ಯವಾಗಿದ್ದಾರೆಯೇ ಎಂಬುದನ್ನು ಪರಿಶೀಲನೆ ಮಾಡಲಾಗುತ್ತದೆ~ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಆಶಾ ಕಾರ್ಯಕರ್ತೆಯರು ಮತ್ತು ಕಿರಿಯ ಶುಶ್ರೂಷಕಿಯರ ತಂಡವನ್ನು ರಚಿಸಲಾಗುತ್ತದೆ. ಇವರು ಎಲ್ಲ ಮನೆಗಳಿಗೆ ಭೇಟಿ ನೀಡಿ ಆರು ವರ್ಷದ ಒಳಗಿನ ಮಕ್ಕಳನ್ನು ಅಂಗನವಾಡಿಗೆ ಕರೆದೊಯ್ದು ತೂಕ ಮಾಡಲಿದ್ದಾರೆ. ಅಲ್ಲದೆ ಯುಕೆಜಿ, ಎಲ್‌ಕೆಜಿ ಮತ್ತು ಒಂದನೇ ತರಗತಿ ಓದುತ್ತಿರುವ ಮಕ್ಕಳನ್ನೂ ತೂಕ ಮಾಡಲಿದ್ದಾರೆ~ ಎಂದರು.

`ಜಿಲ್ಲೆಯಲ್ಲಿ ಒಟ್ಟು 75321 ಆರು ವರ್ಷದ ಒಳಗಿನ ಮಕ್ಕಳಿದ್ದಾರೆ. ಮೇ ತಿಂಗಳಲ್ಲಿ 58341 ಮಕ್ಕಳನ್ನು ತೂಕ ಮಾಡಲಾಗಿದೆ. ಈಗ ಇನ್ನೂ 17 ಸಾವಿರ ಮಕ್ಕಳನ್ನು ತೂಕ ಮಾಡುವ ಗುರಿ ಇದೆ~ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರೀಟಾ ಮಾಡ್ತಾ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಅಧಿಕಾರಿ ಸದಾನಂದ ನಾಯಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.