ADVERTISEMENT

ಅಲೆಯ ಅಬ್ಬರಕ್ಕೆ ಸಿಲುಕಿ ದೋಣಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 10:20 IST
Last Updated 20 ಸೆಪ್ಟೆಂಬರ್ 2013, 10:20 IST

ಉಡುಪಿ: ಮಲ್ಪೆ ಬಂದರಿನ ಹೊರಭಾಗದಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್‌ ಅಲೆಯ ಅಬ್ಬರಕ್ಕೆ ಕಲ್ಲಿಗೆ ಡಿಕ್ಕಿ ಹೊಡೆದು ಹಾನಿಯಾಗಿರುವ ಘಟನೆ ಬುಧವಾರ ಸಂಭವಿಸಿದೆ.

ಡಾಬಾ ಕಲ್ಮಾಡಿ ಅವರಿಗೆ ಸೇರಿದ ವರ್ಣ ಚೇತನ ಬೋಟ್‌ ಹಾನಿಗೀಡಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಈ ಬೋಟ್‌ನಲ್ಲಿ ಇದ್ದ ಒಬ್ಬ ಕಾರ್ಮಿಕ ಈಜಿ ದಡ ಸೇರಿದ್ದು, ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.

ಮಳೆ ಹಾಗೂ ಗಾಳಿಯ ಹಿನ್ನೆಲೆಯಲ್ಲಿ ಬುಧವಾರ ಮೀನುಗಾರಿಕೆಗೆ ತೆರಳದೆ ಬಂದರಿನಲ್ಲಿ ಎಲ್ಲಾ ಬೋಟ್‌ಗಳನ್ನು ನಿಲುಗಡೆ ಮಾಡಲಾಗಿತ್ತು. ಬಂದರಿನಲ್ಲಿ ಸ್ಥಳಾವಕಾಶದ ಕೊರತೆ­ಯಿಂದ ಕೆಲವು ಬೋಟ್‌ಗಳನ್ನು ಹಗ್ಗದಲ್ಲಿ ಒಂದಕ್ಕೊಂದನ್ನು ಬಿಗಿದು ಹೊರಗಡೆ ನಿಲುಗಡೆ ಮಾಡಲಾಗಿತ್ತು.

ರಾತ್ರಿ ವೇಳೆ ಸಮುದ್ರದ ಅಲೆಗಳ ಅಬ್ಬರದಿಂದ ನಿಲುಗಡೆ ಮಾಡಿದ್ದ  ಬೋಟ್‌ಗಳಲ್ಲಿ ಮೂರು ಬೋಟ್‌ಗಳು ಹಗ್ಗ ತುಂಡಾಗಿ ಸಮುದ್ರದ ಕಡೆ ಚಲಿಸಿದ್ದು, ಬೆಳಗಿನ ಜಾವ ಇದನ್ನು ಗಮನಿಸಿದ ಮೀನುಗಾರರು ಎರಡು ಬೋಟ್‌ಗಳನ್ನು ರಕ್ಷಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.

ಆದರೆ ಡಾಬಾ ಕಲ್ಮಾಡಿ ಅವರಿಗೆ ಸೇರಿದ ವರ್ಣ ಚೇತನ ಬೋಟ್‌ ಅಳಿವೆಯಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದು ಹಾನಿಗೊಂಡಿದೆ ಎಂದು ಮೀನುಗಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.