ADVERTISEMENT

ಆಘಾತಕಾರಿ ನಿರ್ಧಾರ: ಸಮಿತಿ ಕಟು ಟೀಕೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 9:10 IST
Last Updated 11 ಅಕ್ಟೋಬರ್ 2011, 9:10 IST

ಉಡುಪಿ: ನಂದಿಕೂರಿನಲ್ಲಿರುವ ಉಡುಪಿ ಉಷ್ಣವಿದ್ಯುತ್ ಸ್ಥಾವರದ (ಯುಪಿಸಿಎಲ್) ಎರಡನೇ ಹಂತ ಕಾರ್ಯಾರಂಭ ಮಾಡುವಂತೆ ಮುಖ್ಯಮಂತ್ರಿ ಸದಾನಂದ ಗೌಡರು ಸೂಚನೆ ನೀಡಿರುವುದನ್ನು ಟೀಕಿಸಿರುವ ನಂದಿಕೂರು ಜನಜಾಗೃತಿ ಸಮಿತಿ, `ಎರಡನೇ ಹಂತದ ಕಾರ್ಯಾರಂಭಕ್ಕೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು ನಿಜಕ್ಕೂ ಆಘಾತಕಾರಿ~ ಎಂದು ಹೇಳಿದೆ.

ಈ ಬಗ್ಗೆ ಸೋಮವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷ ಬಾಲಕೃಷ್ಣಶೆಟ್ಟಿ ದುಬೈ, `ಯುಪಿಸಿಎಲ್ ಎರಡನೇ ಹಂತಕ್ಕೆ ಅನುಮೋದನೆ ನೀಡುವ ಮೂಲಕ ಕಂಪೆನಿಯ ಮೋಡಿಗೆ ಮುಖ್ಯಮಂತ್ರಿಗಳೂ ಬಲಿಯಾದರೇ?~ ಎಂದು ಪ್ರಶ್ನಿಸಿದ್ದಾರೆ.

`ಸರ್ಕಾರಕ್ಕೆ ಸ್ವಂತ ಸಾಮರ್ಥ್ಯದಿಂದ ಸಾಕಷ್ಟು ವಿದ್ಯುತ್ ಉತ್ಪಾದಿಸಲು ಸಾಮರ್ಥ್ಯವಿದೆ. ಆದರೂ ನಾಗರಿಕರಿಗೆ ತೊಂದರೆ ನೀಡುವ ಖಾಸಗಿ ವಿದ್ಯುತ್ ಕಂಪೆನಿಗಳಿಗೆ ಸರ್ಕಾರ ಏಕೆ ಅಷ್ಟೊಂದು ಮಣೆ ಹಾಕುತ್ತಿದೆ~ ಎಂದು ಅವರು ಪ್ರಶ್ನಿಸಿದ್ದಾರೆ.

`ಮುಖ್ಯಮಂತ್ರಿ ಸದಾನಂದ ಗೌಡ ಅವರು ಯುಪಿಸಿಎಲ್‌ನಿಂದ ಆಗಿರುವ ಸಮಸ್ಯೆಗಳ ಸಂಪೂರ್ಣ ಅರಿವಿದ್ದವರು. ಈಗಾಗಲೇ ಕಂಪೆನಿ ಪ್ರಾರಂಭಿಸಿದ ಮೊದಲ ಘಟಕದಿಂದಾಗಿ ಸ್ಥಳೀಯರು ಬಹಳಷ್ಟು ತೊಂದರೆ ಪಡುತ್ತಿದ್ದಾರೆ.
 
ಚರ್ಮರೋಗ, ಆಸ್ತಮಾ ಮತ್ತಿತರ ರೋಗ ರುಜಿನಗಳಿಗೆ ಈಡಾಗಿದ್ದಾರೆ. ಇಲ್ಲಿನ ಕುಡಿಯುವ ನೀರು ಕಲುಷಿತಗೊಂಡಿದೆ. ಅಡಿಕೆ, ತೆಂಗು, ಕಂಗು, ಮಲ್ಲಿಗೆ ಬಾಡಿಹೋಗಿವೆ. ಮೂರು ಬೆಲೆ ತೆಗೆಯುವ ಬತ್ತದ ಗದ್ದೆಗಳು ನಾಶವಾಗಿವೆ. ಹಾಗಿದ್ದರೂ ಎರಡನೇ ಹಂತದ ಕಾರ್ಯಾರಂಭಕ್ಕೆ ಅನುಮತಿ ನೀಡಿದ್ದು ಏಕೆ?~ ಎಂದರು.

`ಇಲ್ಲಿನ ರೈತರು ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಸರ್ಕಾರ ಬಯಸಿದೆಯೇ?~ ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ. `ನಂದಿಕೂರಿನ ಯುಪಿಸಿಎಲ್ ಕಂಪೆನಿಯನ್ನು ಶಾಶ್ವತವಾಗಿ ಮುಚ್ಚಬೇಕು. ಸರ್ಕಾರ ಅಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು~ ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಅವರು ಆಗ್ರಹಿಸಿದ್ದಾರೆ.

`ಸಿ.ಎಂ. ಜತೆ ಮಾತನಾಡುವೆ~
`ಯುಪಿಸಿಎಲ್‌ನ ಮೊದಲ ಘಟಕ ಕಾರ್ಯಾರಂಭ ಮಾಡಿದ ಮೇಲೆ ಸ್ಥಳೀಯ ಪರಿಸರಕ್ಕೆ, ಜನಸಾಮಾನ್ಯರಿಗೆ ಉಂಟಾಗಿರುವ ತೊಂದರೆ ಈವರೆಗೂ ಪರಿಹಾರವೇ ಆಗಿಲ್ಲ. ಹೀಗಾಗಿ ಮೊದಲ ಘಟಕದಿಂದ ಉಂಟಾಗಿರುವ ಸಮಸ್ಯೆ ಪರಿಹಾರವಾದ ಮೇಲೆ ಮಾತ್ರವೇ ಎರಡನೇ ಹಂತ ಕಾರ್ಯಾರಂಭಕ್ಕೆ ಅನುಮೋದನೆ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಜತೆ ಕೂಡಲೇ ಮಾತುಕತೆ ನಡೆಸುತ್ತೇನೆ~
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಅಧೋಕ್ಷಜ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.