ADVERTISEMENT

ಆಡಳಿತ ನಡೆಸಲು ಬಿಜೆಪಿ ಯೋಗ್ಯವಲ್ಲ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 8:50 IST
Last Updated 2 ಮಾರ್ಚ್ 2012, 8:50 IST

ಕುಂದಾಪುರ: `ರಾಜ್ಯದಲ್ಲಿ ಆಡಳಿತ ಚುಕ್ಕಾಣಿಯನ್ನು ಹಿಡಿದಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಮುಳುಗಿದ್ದು ಆಡಳಿತ ನಡೆಸಲು ವಿಫಲವಾಗಿದೆ. ಇದನ್ನು ಸಮರ್ಥ ಬಿಂಬಿಸಿ ಆಡಳಿತ ಪಕ್ಷಕ್ಕೆ ನೀತಿ ಪಾಠವನ್ನು ಹೇಳಬೇಕಾದ ಕಾಂಗ್ರೆಸ್ ವಿರೋಧ ಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುವಲ್ಲಿಯೂ ವೈಫಲ್ಯ ಕಂಡಿದೆ~ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್ ಭೋಜೆ ಗೌಡ ಆರೋಪಿಸಿದರು.

ನಗರದ ಹೋಟೇಲ್ ಹರಿಪ್ರಸಾದ್‌ನ ಅಕ್ಷತಾ ಸಭಾಂಗಣದಲ್ಲಿ ಗುರುವಾರನಡೆದ ಜೆಡಿಎಸ್ ಪಕ್ಷದ ಕುಂದಾಪುರ ಕ್ಷೇತ್ರ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

`ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳ ಜವಾಬ್ದಾರಿಯ ವಿಫಲತೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಲೋಕಸಭಾ ಕ್ಷೇತ್ರದ ಉಪಚುನಾವಣೆ ರಾಜ್ಯದ ರಾಜಕೀಯಕ್ಕೆ ಹೊಸ ದಿಕ್ಸೂಚಿಯಾಗಿ ಪರಿಣಮಿಸಲಿದೆ ರಾಜ್ಯದಲ್ಲಿನ ಜ್ಯಾತ್ಯಾತೀತ ಮತಗಳ ಧ್ರುವೀಕರಣಕ್ಕೆ ಇದು ವೇದಿಕೆಯಾಗಲಿದೆ.
 
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ರೈತರು, ಮೀನುಗಾರರು, ಬಡವರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ನೀಡಿರುವ ಯೋಜನೆಗಳೆ ತನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ~ ಎಂದರು.

ಮುಖಂಡರಾದ ಮಹೇಂದ್ರ ಕುಮಾರ, ದೇವಿಪ್ರಸಾದ ಶೆಟ್ಟಿ, ಕಾರ್ಯಾಧ್ಯಕ್ಷ ಗುಲಾಂ ಮಹಮ್ಮದ್, ಎನ್.ಸಬ್ಲಾಡಿ ಮಂಜಯ್ಯ ಶೆಟ್ಟಿ,  ಅಂಪಾರು ಬಾಲಕೃಷ್ಣ ಶೆಟ್ಟಿ, ಶ್ರೀಕಾಂತ  ಅಡಿಗ,  ರಂಜಿತ್  ಕುಮಾರ ಶೆಟ್ಟಿ, ಜಗದೀಶ್  ಯಡಿಯಾಳ, ಕಿಶೋರ , ಅಲೆಕ್ಸಾಂಡರ್, ರುಕ್ಕು ಪೂಜಾರ್ತಿ, ರಾಧಾದಾಸ್, ಸಂದೇಶ್ ಭಟ್, ಮನ್ಸೂರ್ ಹಾಗೂ ಇಬ್ರಾಹಿಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.