ADVERTISEMENT

ಉಡುಪಿ ಜಿಲ್ಲೆಗೆ ಪಿಇಎಐಎಸ್ ಪ್ರಶಸ್ತಿ

ಕಾರ್ಕಳ ತಾ.ಪಂ., ಬೈಂದೂರು ಗ್ರಾ.ಪಂ.ಗೂ ಗೌರವ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 7:15 IST
Last Updated 6 ಏಪ್ರಿಲ್ 2013, 7:15 IST

ಉಡುಪಿ: `ಅತ್ಯುತ್ತಮ ಸಾಧನೆ ಮಾಡಿರುವ ಉಡುಪಿ ಜಿಲ್ಲಾ ಪಂಚಾಯಿತಿ, ಕಾರ್ಕಳ ತಾಲ್ಲೂಕು ಪಂಚಾಯಿತಿ ಮತ್ತು ಮರವಂತೆ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದ `ಪಂಚಾಯಿತಿ ಸಬಲೀಕರಣ ಮತ್ತು ಉತ್ತರದಾಯಿತ್ವ ಪ್ರೋತ್ಸಾಹ ಯೋಜನೆ'ಯ (ಪಿಇಎಐಎಸ್) 2012-13ನೇ ಸಾಲಿನ ಪ್ರಶಸ್ತಿ ಲಭಿಸಿದೆ' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ ಹೇಳಿದರು.

ಪ್ರಶಸ್ತಿಯೊಂದಿಗೆ ಜಿಲ್ಲಾ ಪಂಚಾಯಿತಿಗೆ 40 ಲಕ್ಷ, ತಾಲ್ಲೂಕು ಪಂಚಾಯಿತಿಗೆ 20 ಲಕ್ಷ ಮತ್ತು ಗ್ರಾಮ ಪಂಚಾಯಿತಿಗೆ 14 ಲಕ್ಷ ರೂಪಾಯಿ ನಗದು ಬಹುಮಾನವೂ ಸಿಗಲಿದೆ. ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗೆ ಒಂದೇ ಬಾರಿ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ. ದೆಹಲಿಯಲ್ಲಿ ಏಪ್ರಿಲ್ 24ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಈ ಪ್ರಶಸ್ತಿ ಪ್ರದಾನ ಮಾಡುವರು ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೂರೂ ಪಂಚಾಯಿತಿಗಳ ಸಾಧನೆಗಳ ಮೌಲ್ಯ ಮಾಪನ ಮಾಡಲು ಕೇಂದ್ರದ ತಂಡವೊಂದು ಬಂದಿತ್ತು. ನಮ್ಮಿಂದ ಅವರು ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಅಲ್ಲದೆ ಪ್ರತಿನಿಧಿಗಳ ಸಂದರ್ಶನವನ್ನೂ ನಡೆಸಿದರು. ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದರಿಂದ ಜಿಲ್ಲೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಇದೊಂದು ಐತಿಹಾಸಿಕ ಸಂದರ್ಭ ಎನ್ನಬಹುದು. ಈ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಿ. ಪ್ರಾಣೇಶ್ ರಾವ್, ಮುಖ್ಯ ಯೋಜನಾಧಿಕಾರಿ ವಿಜಯ್‌ಕುಮಾರ್ ಶೆಟ್ಟಿ, ಲೆಕ್ಕಾಧಿಕಾರಿ ತಿಮ್ಮಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.