ADVERTISEMENT

ಉಡುಪಿ ಜಿಲ್ಲೆ: ಶಿಕ್ಷಣಕ್ಕೆ ರೂ 22ಕೋಟಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 6:20 IST
Last Updated 6 ಜುಲೈ 2012, 6:20 IST
ಉಡುಪಿ ಜಿಲ್ಲೆ: ಶಿಕ್ಷಣಕ್ಕೆ ರೂ 22ಕೋಟಿ
ಉಡುಪಿ ಜಿಲ್ಲೆ: ಶಿಕ್ಷಣಕ್ಕೆ ರೂ 22ಕೋಟಿ   

ಪಡುಬಿದ್ರಿ: ಉಡುಪಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ 22ಕೋಟಿ ರೂಪಾಯಿ ಕ್ರಿಯಾ ಯೋಜನೆ ರೂಪಿಸಿದ್ದು,  ಆರೋಗ್ಯ ಕ್ಷೇತ್ರದೊಂದಿಗೆ ಶಿಕ್ಷಣ ಕ್ಷೇತ್ರದಲ್ಲೂ ಜಿಲ್ಲೆ ಮುಂಚೂಣಿಯಲ್ಲಿದೆ ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಹೇಳಿದರು.

ಇಲ್ಲಿನ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆರಂಭ ಗೊಂಡ  `ಶಾಲೆಗಾಗಿ ನಾವು-ನೀವು~  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರದ ಆಂದೋಲನ ಮಾದರಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಮುಂದಿನ 3 ಹಂತಗಳಲ್ಲಿ ಜಾರಿಗೊಂಡು ಖಾಸಗಿ ಶಾಲೆಗೆ ಪ್ರತಿಸ್ಪರ್ಧಿಯಾಗಿ ಸರಕಾರಿ ಶಾಲೆಗಳನ್ನು ಮುಂಚೂಣಿಗೆ ತರುವುದು ಮೂಲ ಉದ್ದೇಶ ಎಂದ ಅವರು ಇಚ್ಚಾಶಕ್ತಿ, ಸಮುದಾಯದ ಸಹಭಾಗಿತ್ವ, ಅಧ್ಯಾಪಕರ ಸ್ಪೂರ್ತಿ ಯಿಂದ ಯಾವುದೇ ಸರ್ಕಾರಿ ಶಾಲೆಗಳನ್ನು ಮುಂಚೂಣಿಗೆ ತರಲು ಸಾಧ್ಯ. ಇದಕ್ಕೆ ಒಳಕಾಡು ಶಾಲೆಯೇ ಉದಾಹರಣೆ ಎಂದರು.

ಇದೇ ವೇಳೆ ಸರಕಾರಿ ಶಾಲೆಗಳ ಆಸ್ತಿವಹಿ ನಿರ್ವಹಣೆ, ಸ್ಥಿರಸೊತ್ತುಗಳ ಕಾಪಿಡುವಿಕೆಗೆ ಶೀಘ್ರ ಸಮಿತಿ ರಚಿಸಿ ಕಾರ್ಯಾರಂಭ ಮಾಡಲಾಗುವುದು. ಈ ನಿಟ್ಟಿನಲ್ಲಿ ಹಲವು ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಲು ಈಗಾಗಲೇ ಅನುದಾನ ಬಿಡುಗಡೆ ಮಾಡಿರುವುದಾಗಿ ಅವರು ಮಾಹಿತಿ ನೀಡಿದರು.

ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಎಸ್. ಪ್ರಭಾಕರ ಶರ್ಮ ಮಾತನಾಡಿ, ಅಧಿಕಾರಿಗಳು, ಶಿಕ್ಷಕರು ಸರಿಯಾಗಿ ಕೆಲಸ ಮಾಡಿದರೆ ಸಮಸ್ಯೆ ಶೀಘ್ರ ಪರಿಹಾರವಾಗಲಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದೀಗ ನಾವು ಈ ಕಾರ್ಯಕ್ರಮದ ಮೂಲಕ ಆತ್ಮ ನಿರೀಕ್ಷೆಯ ಹಂತ ತಲುಪಿದ್ದೇವೆ ಎಂದರು.

ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ವಿಜಯ ಲಕ್ಷ್ಮೀ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ತಾ.ಪಂ ಸದಸ್ಯ ಭಾಸ್ಕರ ಪಡುಬಿದ್ರಿ, ಗ್ರಾ.ಪಂ.ಉಪಾಧ್ಯಕ್ಷೆ ಸೇವಂತಿ ಸದಾಶಿವ, ಸದಸ್ಯರಾದ ವಿಜಯ ಎಂ. ಅಮೀನ್, ಶೇಖರ ಶೆಟ್ಟಿ, ಹರಿಣಾಕ್ಷಿ, ರವಿ ಶೆಟ್ಟಿ, ಶ್ರೀನಿವಾಸ ಶರ್ಮ, ಅಶೋಕ್ ಸಾಲ್ಯಾನ್, ಸೀತಾರಾಮ, ಜಿ.ಪಂ ಉಪ ಕಾರ್ಯದರ್ಶಿ ಡಿ.ಪ್ರಾಣೇಶ್ ರಾವ್, ಮುಖ್ಯ ಯೋಜನಾಧಿಕಾರಿ ವಿಜಯ ಕುಮಾರ್ ಶೆಟ್ಟಿ, ಮುಖ್ಯ ಲೆಕ್ಕಾಧಿಕಾರಿ ತಿಮ್ಮಪ್ಪ, ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ, ಎಸ್‌ಡಿಎಂಸಿ ಅಧ್ಯಕ್ಷ ಪಾಂಡು ಕೋಟ್ಯಾನ್ ವೇದಿಕೆಯಲ್ಲಿದ್ದರು.

ಉಡುಪಿ ಜಿಲ್ಲಾ ಉಪ ನಿರ್ದೇಶಕ ನಾಗೇಂದ್ರ ಮಧ್ಯಸ್ಥ, ಶಿಕ್ಷಣ ಇಲಾಖಾ ಉಪಯೋಜನಾಧಿಕಾರಿ ನಾಗರಾಜ್, ಶಿಕ್ಷಕಿ ಮಂಗಳಾ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ ಇದ್ದರು.

`ಅರಿವು ಅಗತ್ಯ~
ಬ್ರಹ್ಮಾವರ ವರದಿ: ಖಾಸಗಿ ಶಾಲೆಯಲ್ಲಿ ಸಿಗುವಂತಹ ಉತ್ತಮ ಗುಣಮಟ್ಟದ ಶಿಕ್ಷಣ ಇಂದು ಸರ್ಕಾರಿ ಶಾಲೆಗಳಲ್ಲೂ ಸಿಗುತ್ತಿದೆ. ಇದರ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ `ಶಾಲೆಗಾಗಿ ನಾವು ನೀವು~ ಮಕ್ಕಳ ಶಿಕ್ಷಣ ಹಕ್ಕು ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಶಾಲೆಗೆ ಬರದೇ ಇರುವ ಬಗ್ಗೆ ಕಾರಣವನ್ನು ತಿಳಿದು, ಅವರ ಸಮಸ್ಯೆಯನ್ನು ಬಗೆಹರಿಸಿ ಶಾಲೆಗೆ ಕರೆ ತರುವ ಪ್ರಯತ್ನವಾಗಬೇಕು. ಖಾಸಗಿ, ಸರ್ಕಾರಿ ಭೇದ ಭಾವವನ್ನು ಬಿಟ್ಟು ಗುಣಮಟ್ಟದ ಶಿಕ್ಷಣ ಸಿಗುವತ್ತ ಪೋಷಕರು ಗಮನ ಹರಿಸಬೇಕು ಎಂದರು.

ಉಪಪ್ರಾಂಶುಪಾಲ ಬಿ.ಟಿ.ನಾಯ್ಕ ಮಾತನಾಡಿದರು. ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಶ್ಯಾನುಭಾಗ್, ಶಾಲಾಭಿವೃದ್ಧಿ ಸಮಿತಿಯ ರಘುಪತಿ ಬ್ರಹ್ಮಾವರ, ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ತಾ.ಪಂ ಸದಸ್ಯ ವಿಠಲ ಪೂಜಾರಿ, ಕಾಲೇಜಿನ ಪ್ರಾಂಶುಪಾಲೆ ತಾರಾದೇವಿ, ಉಪಪ್ರಾಂಶುಪಾಲ ಬಿ.ಟಿ.ನಾಯ್ಕ, ಅಧ್ಯಾಪಕಿ ಸುಶೀಲ ಕೆ. ಮತ್ತಿತರರು ಉಪಸ್ಥಿತರಿದ್ದರು.

ಬೈಂದೂರು ವರದಿ: ದೇಶದಲ್ಲಿ ಜಾರಿಯಾಗಿರುವ ಕಡ್ಡಾಯ ಶಿಕ್ಷಣ ಕಾಯಿದೆಯ ಉದ್ದೇಶ ಎಲ್ಲರಿಗೆ ಶಿಕ್ಷಣ ನೀಡುವುದು ಎಂದಿದ್ದರೂ ಸತ್ಪ್ರಜೆಗಳನ್ನು ರೂಪಿಸುವ ಮಹತ್ವದ ಗುರಿಯನ್ನು ಅದು ಕಡೆಗಣಿಸುವಂತಿಲ್ಲ ಎಂದು ಶಾಸಕ ಕೆ.ಲಕ್ಷ್ಮೀನಾರಾಯಣ ಹೇಳಿದರು. 

 ಬೈಂದೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ನಡೆದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ವಿದ್ಯಾರ್ಥಿ, ಶಿಕ್ಷಕ, ಪೋಷಕ ಮತ್ತು ಜನಪ್ರತಿನಿಧಿಗಳ ಸಭೆ ಉದ್ದೇಶಿಸಿ ಮಾತನಾಡಿದರು. ಜನರು ವಿವಿಧ ವಾದಗಳಿಗೆ ಬದ್ಧರಾದರೆ, ವಿದ್ಯಾರ್ಥಿಗಳು `ಶಿಕ್ಷಣವಾದ~ಕ್ಕೆ ಬದ್ಧರಾಗಬೇಕು. ಆ ಮೂಲಕ ತಮ್ಮ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಶಿಕ್ಷಣವು ಸಮಾಜ ತನ್ನ ಮೇಲ್ಮೆಗಾಗಿ ನಡೆಸುವ ಒಂದು ಅತ್ಯಂತ ಮಹತ್ವದ ಪ್ರಕ್ರಿಯೆ. ಅದನ್ನು ಸಂಬಂಧಿಸಿದ ಎಲ್ಲರೂ ಅರಿತು ಅದರಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಹೇಳಿದರು. 

 ಯಡ್ತರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಸದಸ್ಯೆ ಸುಪ್ರೀತಾ ದೀಪಕ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ರಾಜು ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸದಾಶಿವ ಡಿ. ಪಡುವರಿ, ಸದಸ್ಯೆ ರೆನಿಟಾ, ಕಾಲೇಜಿನ ಪ್ರಾಂಶುಪಾಲ ಟಿ.ಪಾಲಾಕ್ಷ, ಡಿಸಿಸಿ ಬ್ಯಾಂಕ್ ಶಾಖಾ ಪ್ರಬಂಧಕ ದೊಂಬೆ ಕೃಷ್ಣ ಬಿಲ್ಲವ ಮತ್ತಿತರರು ಇದ್ದರು. 

   ಉಪ ಪ್ರಾಂಶುಪಾಲೆ ಬಿ.ಜ್ಯೋತಿ ಸ್ವಾಗತಿಸಿದರು. ಎಚ್.ಎಂ.ಪಟಗಾರ್ ವಂದಿಸಿದರು. ಪ್ರಭಾಕರ ಪಡುವರಿ ನಿರೂಪಿಸಿದರು. ಸಭೆಯ ಪೂರ್ವದಲ್ಲಿ ಮಕ್ಕಳು ಶಿಕ್ಷಣದ ಮಹತ್ವ ಮತ್ತು ಶಿಕ್ಷಣದ ಹಕ್ಕುಗಳ ಬಗೆಗಿನ ಘೋಷಣೆಗಳೊಂದಿಗೆ ನಗರದಲ್ಲಿ ಜಾಥಾ ನಡೆಸಿದರು.

ಕಾರ್ಕಳ ವರದಿ: ಇಲ್ಲಿನ ಪೆರ್ವಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ `ಶಾಲೆಗಾಗಿ ನಾವು -ನೀವು  ಕಾರ್ಯಕ್ರಮ ನಡೆಯಿತು. 

 ತಹಶೀಲ್ದಾರ್ ಜಗನ್ನಾಥ ರಾವ್, ಶಾಲಾ ಮೇಲುಸ್ತುವಾರಿ ಅಧ್ಯಕ್ಷ ಶ್ರೀರಮಣ ಆಚಾರ್, ಪುರಸಭಾ ಸದಸ್ಯ ಪ್ರಕಾಶ ರಾವ್, ಮುಖ್ಯ ಶಿಕ್ಷಕಿ ಲಕ್ಷ್ಮೀ ಹೆಗ್ಡೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ `ಶಾಲೆಗಾಗಿ ನಾವು -ನೀವು~  ಕಾರ್ಯಕ್ರಮದ ಉದ್ದೇಶ ವನ್ನು ಮನವರಿಕೆ ಮಾಡಿಕೊಡ ಲಾಯಿತು. ಪ್ರತಿಜ್ಞಾವಿಧಿ ಬೋಧಿಸಲಾ ಯಿತು. ಶಿಕ್ಷಕ ನಾರಾಯಣ ಶೆಣೈ ಅನಿಸಿಕೆ ವ್ಯಕ್ತಪಡಿಸಿದರು.
 
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಪದ್ಮನಾಭ ಭಟ್, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಣ್ಣಿ ಎಂ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುವರ್ಣಾ ವಂದಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.