ADVERTISEMENT

ಉಡುಪಿ, ದ.ಕ ಜಿಲ್ಲೆ ಅಭಿವೃದ್ಧಿಗೆ ವಿಶೇಷ ಯೋಜನೆ: ಮೊಯಿಲಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 8:50 IST
Last Updated 20 ಆಗಸ್ಟ್ 2012, 8:50 IST

ಕಾರ್ಕಳ: ಉಡುಪಿ ಮತ್ತು ದ.ಕ. ಜಿಲ್ಲೆಗಳ ಅಭಿವೃದ್ಧಿಗೆ ಪ್ರತ್ಯೇಕ ಸಮೀಕ್ಷೆ ನಡೆಸಿ ಯೋಜನೆ ರೂಪಿಸಲಾಗುವುದು ಎಂದು ಕೇಂದ್ರ ಇಂಧನ ಹಾಗೂ ಕಾರ್ಪೋರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ವಿದ್ಯುದೀಕರಣಕ್ಕಾಗಿ ಉಡುಪಿಗೆ ರೂ. 20 ಕೋಟಿ ಹಾಗೂ ದ.ಕ. ಜಿಲ್ಲೆಗೆ ರೂ.60 ಕೋಟಿ ಮಂಜೂರಾಗಿದೆ. ತೀರ್ಥಹಳ್ಳಿಯಿಂದ ಉಡುಪಿ ತನಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 137ಕೋಟಿ ಯೋಜನೆ ಸಿದ್ಧವಾಗಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆಯಿಂದ ಸಿದ್ಧವಾದ ವರದಿ ಮುಖ್ಯಮಂತ್ರಿಗೆ ಹೋಗಿದ್ದು, ಕೇಂದ್ರಕ್ಕೆ ವರದಿ ಬಂದಾಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಕಳ -ಉಡುಪಿ ರಸ್ತೆಯನ್ನು ಸಿಆರ್‌ಎಫ್ ಅನುದಾನದಿಂದ ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ. ರಾಜ್ಯ ಸರ್ಕಾರ ಪಡುಬಿದ್ರಿ ಮತ್ತು ಕಾರ್ಕಳ ರಸ್ತೆಯ ವಿಸ್ತರಣೆಯನ್ನು ಎಡಿಬಿ ಯೋಜನೆಯಡಿ ಮಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿ 13ರ ಮಂಗಳೂರು- ಸೊಲ್ಲಾಪುರ ರಸ್ತೆಯನ್ನು ಚತುಷ್ಪಥ ವಾಗಿ ಮಾಡುವ ಯೋಜನೆ ಸಿದ್ಧವಾಗುತ್ತಿದೆ ಎಂದರು.

`ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದರೆ ಮಾತ್ರ ಕೇಂದ್ರ ಅನುದಾನ ನೀಡುತ್ತದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರದ ವಿವೇಚನೆಯೇ ಅಂತಿಮ. ರಾಜ್ಯ ಸರ್ಕಾರದ ತೀರ್ಮಾನವನ್ನು ನಾನು ಅನುಮೋದಿಸುತ್ತೇನೆ~ ಎಂದ ಅವರು ಈ ವಿಷಯದಲ್ಲಿ ರಾಜಕೀಯ ಮಾಡಿ  ಜನರಲ್ಲಿ ಆತಂಕ ಹುಟ್ಟಿಸುವ ಕೆಲಸವಾಗಬಾರದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಚ್.ಗೋಪಾಲ ಭಂಡಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ನೀರೆ ಕೃಷ್ಣ ಶೆಟ್ಟಿ, ಪ್ರಸನ್ನ ಬಲ್ಲಾಳ್, ಅವೆಲಿನ್ ಲುಯೀಸ್, ಪುರಸಭಾ ಅಧ್ಯಕ್ಷೆ ಪ್ರತಿಮಾ ಮೋಹನ್, ಉಪಾಧ್ಯಕ್ಷೆ ಪ್ರೇಮಾ ಆಚಾರ್ಯ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.