ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಮಂಗಳವಾರ ಹಗಲಿಡೀ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ನಗರದ ಕೆಲವೆಡೆ ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ನೀರು ರಸ್ತೆಯಲ್ಲಿ ಹರಿಯುತ್ತಿದ್ದ ಪರಿಣಾಮ ಪಾದಚಾರಿಗಳಿಗೆ ತೊಂದರೆಯಾಯಿತು.
ಜಿಲ್ಲೆಯಲ್ಲಿ ಮಳೆಯಿಂದಾಗಿ ಸುಮಾರು ಎರಡು ಲಕ್ಷ ರೂಪಾಯಿಯಷ್ಟು ಹಾನಿ ಸಂಭವಿಸಿದೆ.
ಜಿಲ್ಲೆಯಲ್ಲಿ ಸರಾಸರಿ 72ಮಿ.ಮೀ. ಮಳೆಯಾಗಿದೆ. ಕಾರ್ಕಳ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 180.2ಮಿ.ಮೀ, ಉಡುಪಿ ತಾಲ್ಲೂಕಿನಲ್ಲಿ 142.2ಮಿ.ಮೀ. ಮತ್ತು ಕುಂದಾಪುರ ತಾಲ್ಲೂಕಿನಲ್ಲಿ 100ಮಿ.ಮೀ ಹಾಗೂ ಮಳೆಯಾಗಿದೆ.
ಮಳೆ: ಕಾರ್ಕಳದಲ್ಲಿ ಹಾನಿ
ಕಾರ್ಕಳ: ತಾಲ್ಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗಾಳಿಗೆ ಅಲ್ಲಲ್ಲಿ ಹಾನಿ ಸಂಭಿಸಿದೆ.
ತಾಲ್ಲೂಕಿನ ಹಿರ್ಗಾನ ಗ್ರಾಮದ ಹೇಮಲತಾ ಎನ್ನುವವರ ವಾಸದ ಮನೆ ಮೇಲೆ ಬಿದಿರಿನ ಮರದ ಪೊದೆ ಬಿದ್ದು ರೂ. 10ಸಾವಿರ ನಷ್ಟ ಸಂಭವಿಸಿದೆ.
ತಾಲ್ಲೂಕಿನ ನಂದಳಿಕೆ ಗ್ರಾಮದ ಉಮೇಶ ಪೂಜಾರಿ ಎನ್ನುವವರ ಮನೆ ಮೇಲೆ ಸಾಗುವಾನಿ ಬಿದಿರಿನ ಮರ ಬಿದ್ದು ರೂ. 5ಸಾವಿರ ನಷ್ಟ ಸಂಭವಿಸಿದೆ.
ತಾಲ್ಲೂಕಿನ ಈದು ಗ್ರಾಮದ ಮೂಡಬೆಟ್ಟು ಎಂಬಲ್ಲಿ ಶೋಭಾ ಶೆಟ್ಟಿ ಎನ್ನುವವರ ವಾಸದ ಮನೆಗೆ ಮಳೆಗಾಳಿಯಿಂದ ರೂ. 3ಸಾವಿರ ನಷ್ಟ ಸಂಭವಿಸಿದೆ.
ತಾಲ್ಲೂಕಿನ ಜಾರ್ಕಳ ಗ್ರಾಮದ ಮುಂಡ್ಲಿ ಎಂಬಲ್ಲಿನ ಸುಂದರಿ ಎನ್ನುವವರ ಹಟ್ಟಿ ಕೊಟ್ಟಿಗೆಗೆ ಮಳೆಗಾಳಿಯ ಪರಿಣಾಮವಾಗಿ ರೂ. 10ಸಾವಿರ ಹಾನಿ ಸಂಭವಿಸಿದೆ.
ಹೆಬ್ರಿಯಲ್ಲೂ ಧಾರಾಕಾರ ಮಳೆ
ಹೆಬ್ರಿ: ಹೆಬ್ರಿ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮುನಿಯಾಲು ಪಡುಕುಡೂರು ಪರಿಸರದಲ್ಲಿ ಮಂಗಳವಾರ ಬೆಳಿಗ್ಗೆ ಗಾಳಿ ಮಳೆ ಬಂದಿದೆ.
ಹೆಬ್ರಿಯ ಸೀತಾನದಿ ತುಂಬಿ ಹರಿಯುತ್ತಿದೆ. ಮಾತಿಬೆಟ್ಟು, ಮುದ್ರಾಡಿ, ಶಿವಪುರ ಹೊಳೆಗಳು ತುಂಬಿ ಹರಿಯುತ್ತಿದ್ದು ಕೆರೆ ಹಳ್ಳಗಳು ಭರ್ತಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.