ಮುಡಿಪು: ರಾಷ್ಟ್ರದ ಶೈಕ್ಷಣಿಕ ಸಾಧನೆಯನ್ನು ಜನಸಂಖ್ಯೆಯ ಆಧಾರಿತವಾಗಿ ಪರಿಗಣಿಸಿದರೆ ಇತರ ದೇಶಗಳು ಉನ್ನತ ಶಿಕ್ಷಣದಲ್ಲಿ ಯಶಸ್ವಿ ಸಾಧನೆ ತೋರಿದೆ, ಆದರೆ ಭಾರತವು ನಿರೀಕ್ಷಿತ ಮಟ್ಟದಲ್ಲಿ ಸಾಧನೆಯನ್ನು ಕಂಡು ಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ಎಂದರು.
ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ವಿಭಾಗದ ವತಿಯಿಂದ ಮಂಗಳವಾರ ವಿ.ವಿ. ಯಕ್ಷಗಾನ ಕಲಾಮಂದಿರದಲ್ಲಿ ನಡೆದ ರಾಜ್ಯಮಟ್ಟದ ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ಉತ್ಸವ ‘ಮ್ಯಾಗ್ನಂ-2011’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಯುವ ಪೀಳಿಗೆಯ ಸಾಧನೆ ದೇಶದ ಉನ್ನತಿಗೆ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾವಂತ ಸಮಾಜ ನಿರ್ಮಾಣ ನಮ್ಮ ಮೊದಲ ಕರ್ತವ್ಯವಾಗಬೇಕಿದೆ. ಹೀಗಾದರೆ ದೇಶದ ಬಾಹ್ಯಾಕಾಶ, ಸಾರ್ವಜನಿಕ ರಂಗ, ವೈಜ್ಞಾನಿಕ, ಕೈಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮೆರೆಯಲು ಸಾಧ್ಯ ಎಂ ದರು.
ಬೆಂಗಳೂರಿನ ಅಶ್ವಿನ್ ಅಜಿಲ ಮಾತನಾಡಿ, ಪ್ರಸ್ತುತ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಯಶಸ್ಸಿನ ಮೆಟ್ಟಿಲೇರಬೇಕು ಎಂದರು. ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಸ್.ಯಡಿಪಡಿತ್ತಾಯ, ವೆಂಕಟೇಶ್ ಪಿ.ಎಸ್, ಶಕೀರಾ ಇರ್ಫಾನ, ಕಾರ್ಯಕ್ರಮ ಸಂಯೋಜಕಿ ಶ್ರೀದೇವಿ ರಾವ್, ರೋವಿನಾ ಶರೋಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.