ADVERTISEMENT

ಎನ್‌ಇಇಟಿ ವಿರೋಧಿಸಿ ಎಬಿವಿಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 8:25 IST
Last Updated 10 ನವೆಂಬರ್ 2012, 8:25 IST

ಉಡುಪಿ: ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (ಎನ್‌ಇಇಟಿ) ಈ ವರ್ಷದಿಂದ ಜಾರಿಗೆ ತರಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಉಡುಪಿ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಅವೈಜ್ಞಾನಿಕ ಕ್ರಮ ಕೈಗೊಂಡಿದ್ದು, ಇದರಿಂದ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗತ್ತದೆ. ಆದ್ದರಿಂದ ಎನ್‌ಇಇಟಿಯನ್ನು ಹಿಂದಕ್ಕೆ ಪಡೆಯಬೇಕು. ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಮೂಡಿರುವ ಗೊಂದಲವನ್ನು ಕೂಡಲೇ ನಿವಾರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸರ್ವೀಸ್ ಬಸ್ ನಿಲ್ದಾಣದ ಬಳಿ ಸೇರಿದ್ದ ನೂರಾರು ವಿದ್ಯಾರ್ಥಿಗಳು ತಾಲ್ಲೂಕು ಕಚೇರಿ ವರೆಗೆ ರ‌್ಯಾಲಿ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

`ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎನ್‌ಇಇಟಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್, ಮಹರಾಷ್ಟ್ರ ಮೊದಲಾದ ರಾಜ್ಯಗಳು ಕೇಂದ್ರಕ್ಕೆ ಸ್ಪಷ್ಟಪಡಿಸಿವೆ. ಆದರೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ ಎನ್‌ಇಇಟಿಗೆ ಒಪ್ಪಿಗೆ ನೀಡಿದೆ.
 
ಈ ಮೂಲಕ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಬಲಿಕೊಡಲು ಯತ್ನಿಸುತ್ತಿದೆ~ ಎಂದು ಎಬಿವಿಪಿ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಹೇಳಿದರು.ಎನ್‌ಇಇಟಿ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕೇಂದ್ರದ ಪಠ್ಯಕ್ರಮವನ್ನು ಅಭ್ಯಾಸ ಮಾಡಿರುತ್ತಾರೆ. ಆದರೆ ನಮ್ಮ ರಾಜ್ಯದ ವಿದ್ಯಾರ್ಥಿಗಳು ರಾಜ್ಯದ ಪಠ್ಯವನ್ನು ಓದಿದ್ದಾರೆ. ಕೇಂದ್ರ ಮತ್ತು ರಾಜ್ಯದ ಪಠ್ಯಕ್ರಮಗಳ ಮಧ್ಯೆ ಶೇ 40 ವ್ಯತ್ಯಾಸ ಇದೆ ಎಂದರು.

ರಾಜ್ಯ ಸರ್ಕಾರದ ಪಠ್ಯಕ್ರಮವನ್ನು 75 ಗಂಟೆಗಳಲ್ಲಿ ಬೋಧಿಲಾಗುತ್ತದೆ. ಆದರೆ ಕೇಂದ್ರದ ಪಠ್ಯವನ್ನು 120 ಗಂಟೆಗಳಲ್ಲಿ ಬೋಧಿಸುತ್ತಾರೆ. ಸಿಇಟಿ ಪರೀಕ್ಷೆಯ ಅವಧಿ 210 ನಿಮಿಷ. ಈ ಪರೀಕ್ಷೆಯನ್ನು ಎರಡು ದಿನ ನಡೆಸಲಾಗುತ್ತದೆ. ಆದರೆ ಎನ್‌ಇಇಟಿ ಪರೀಕ್ಷೆಯನ್ನು ಒಂದೇ ದಿನ ನಡೆಸಲಾಗುತ್ತದೆ. ಇದರ ಅವಧಿ 180 ನಿಮಿಷ ಆಗಿದೆ ಎಂದು ಅವರು ಹೇಳಿದರು. 

ಎನ್‌ಇಇಟಿ ಜಾರಿಗೆ ಬಂದದ್ದೇ ಆದಲ್ಲಿ ರಾಜ್ಯದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ವೈದ್ಯಕೀಯ ಸೀಟುಗಳಿಂದ ವಂಚಿತರಾಗಲಿದ್ದಾರೆ. ಹೊರ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೇಂದ್ರದೊಂದಿಗೆ ಮಾಡಿಕೊಂಡಿರುವ ಒಪ್ಪಂದದಿಂದ ರಾಜ್ಯ ಸರ್ಕಾರ ಕೂಡಲೇ ಹೊರಗೆ ಬರಬೇಕು. ಇಲ್ಲದಿದ್ದರೆ ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.ಪೂರ್ಣ ಪ್ರಜ್ಞ ಕಾಲೇಜು, ವಿದ್ಯೋದಯ ಕಾಲೇಜು, ಎಂಐಟಿ ಮತ್ತಿತರ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.