ADVERTISEMENT

ಒತ್ತಿನೆಣೆ ಸ್ಲೋಪ್‌ ವಾಲ್‌ ಕುಸಿಯುವ ಭೀತಿ

ಕೈಕೊಟ್ಟ ಹೊಸ ಪ್ರಯೋಗ: ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಆತಂಕ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 11:11 IST
Last Updated 10 ಜೂನ್ 2018, 11:11 IST

ಬೈಂದೂರು: ಬೈಂದೂರು-ಶಿರೂರು ನಡುವಿನ ಒತ್ತಿನೆಣೆ ತಿರುವಿನ ಏರುದಾರಿ ಇಳಿಜಾರಿನಲ್ಲಿ ನಿರ್ಮಾಣ ಮಾಡಲಾಗಿದ್ದ ’ಸ್ಲೋಪ್ ಪ್ರೊಟೆಕ್ಷನ್ ವಾಲ್’ನಲ್ಲಿ ಗುರುವಾರ, ಶುಕ್ರವಾರ ಸುರಿದ ವ್ಯಾಪಕ ಮಳೆಗೆ ನೀರು ಪ್ರೊಟೆಕ್ಷನ್ ವಾಲ್‌ನ ಅಡಿಯಲ್ಲಿ ಇಂಗಿದೆ. ಪರಿಣಾಮ ತಳಕ್ಕೆ ಇಳಿದು ವಾಲ್‌ನ ಬುಡದಲ್ಲಿ ನಿರ್ಮಿಸಿದ್ದ ಕಾಂಕ್ರೀಟ್‌ನ  ತಳಪಾಯದ 4 ಮೀಟರ್ ಉದ್ದದ ಭಾಗ ಭೇದಿಸಿದೆ. ಪರಿಣಾಮ ಅದು ಕುಸಿದು ಬಿದ್ದಿರುವುದು ಈಗ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಕಣಿವೆಯಲ್ಲಿ ಹೆದ್ದಾರಿ: ಇಲ್ಲಿ ಹಿಂದಿದ್ದ ತಿರುವಿನ ತೀವ್ರತೆ ಕಡಿಮೆ ಮಾಡಲು ಎತ್ತರದ ಗುಡ್ಡ ಕಡಿದು ಹೆದ್ದಾರಿ ಬಹು ಭಾಗ ಹೊಸದಾಗಿ ನಿರ್ಮಿಸಲಾಗಿದೆ. ಅದರ ಪರಿಣಾಮ ಹೆದ್ದಾರಿಯು ಎರಡು ಗುಡ್ಡಗಳ ನಡುವಿನ ಕಣಿವೆಯಂತಹ ಪ್ರದೇಶದಲ್ಲಿ ಸಾಗುತ್ತದೆ. ಗುಡ್ಡದ ಎತ್ತರ 10 ರಿಂದ 15 ಮೀಟರ್ ಇದೆ.

ಇದರ ಹೆಚ್ಚಿನ ಭಾಗದಲ್ಲಿರುವುದು ಮಿದು ಮಣ್ಣು. ಗುಡ್ಡದ ಮೇಲಿನಿಂದ ಹರಿದು ಬರುವ ನೀರಿನೊಂದಿಗೆ ಅದು ಕುಸಿದು ರಸ್ತೆ, ಚರಂಡಿ ಮೇಲೆ ಹರಡಿಕೊಳ್ಳುವುದು ಇಲ್ಲಿನ ಸಮಸ್ಯೆ. ಗುಡ್ಡಗಳನ್ನು ಈಚೆಗೆ ಇಳಿಜಾರುಗೊಳಿಸಿದ್ದರಿಂದ ಮತ್ತು ಒಂದಷ್ಟು ಭಾಗಕ್ಕೆ ಸ್ಲೋಪ್ ಪ್ರೊಟೆಕ್ಷನ್ ವಾಲ್ ನಿರ್ಮಿಸಿದ್ದರಿಂದ ಈ ಮಳೆಗಾಲದಲ್ಲಿ ತೊಂದರೆಯಾಗದು ಎಂಬ ಭರವಸೆ ಮೂಡಿತ್ತು. ಈಗ ಸಂಭವಿಸಿರುವ ಕುಸಿತ ಆ ಭರವಸೆ ಹುಸಿ ಮಾಡಿದೆ.

ADVERTISEMENT

ಸೀಮಿತ ಪ್ರೊಟೆಕ್ಷನ್ ವಾಲ್: ಸೀಮಿತ ಪ್ರದೇಶಕ್ಕೆ ಮಾತ್ರ ಪ್ರೊಟೆಕ್ಷನ್ ವಾಲ್ ನಿರ್ಮಾಣ ಮಾಡಲಾಗಿದೆ. ಪಶ್ಚಿಮದ ಪೂರ್ತಿ ಭಾಗದಲ್ಲಿ ಮತ್ತು ಪೂರ್ವದ ಬಹುಭಾಗದಲ್ಲಿ ಅದನ್ನು ಅಳವಡಿಸಿಲ್ಲ. ಪಶ್ಚಿಮದ ಕೆಲವೆಡೆ ಈಗಾಗಲೆ ಮಣ್ಣು ಕುಸಿದಿದೆ. ಉಳಿದೆಡೆ ಹರಿಯುವ ನೀರಿನೊಂದಿಗೆ ಮಣ್ಣು ಕುಸಿದು ಚರಂಡಿಯಲ್ಲಿ ಸಂಗ್ರಹ ಆಗುತ್ತಿದೆ.

ಕುಸಿತ ಹೆಚ್ಚಾದರೆ ಆತಂಕ: ಹೆದ್ದಾರಿಯ ಎರಡೂ ಕಡೆ ವಾಹನ ಸಂಚಾರಕ್ಕೆ ಅವಕಾಶ ಇರುವುದರಿಂದ ಮತ್ತು ಕುಸಿದ ಮಣ್ಣು ಸಣ್ಣ ಪ್ರಮಾಣದಲ್ಲಿ ಚರಂಡಿ ಸಂಗ್ರಹ ಆಗುತ್ತಿರುವುದು ಸಂಚಾರಕ್ಕೆ ತೊಡಕು ಆಗಬಹುದು. ಆದರೆ, ಕುಸಿಯುವ ಮಣ್ಣಿನ ಪ್ರಮಾಣ ಹೆಚ್ಚಾದರೆ ಆತಂಕ ಸೃಷ್ಟಿ ಆಗಲಿದೆ ಎಂದು ವಾಹನ ಚಾಲಕ ಶಿರೂರಿನ ಕೃಷ್ಣ ದೇವಾಡಿಗ ಹೇಳಿದರು.

ಸಂಭಾವ್ಯ ಆತಂಕ ಎದುರಿಸುವುದಕ್ಕೆ ಕಾರ್ಮಿಕರು ಮತ್ತು ಯಂತ್ರಗಳು ಸದಾ ಸಿದ್ಧವಾಗಿವೆ. ಆತಂಕಕ್ಕೆ ಅವಕಾಶವಿಲ್ಲ ಎನ್ನುತ್ತಾರೆ ಗುತ್ತಿಗೆದಾರ ಸಂಸ್ಥೆಯ ಯೊಜನಾ ವ್ಯವಸ್ಥಾಪಕ ಯೋಗೇಂದ್ರಪ್ಪ. ಈ ನಡುವೆ ಕುಂದಾಪುರ ಉಪ ವಿಭಾಗಾಧಿಕಾರಿ ಟಿ. ಭೂಬಾಲನ್ ಮತ್ತು ಬೈಂದೂರು ತಹಶೀಲ್ದಾರ್‌ ಪುರಂದರ ಹೆಗ್ಡೆ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಬೈಂದೂರು ಪೊಲೀಸರು, ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಕೂಡ ಇಲ್ಲಿನ ಬೆಳವಣಿಗೆಯತ್ತ ನಿಗಾ ಇಟ್ಟಿದ್ದಾರೆ.

ಗುಡ್ಡ ಕುಸಿಯುವುದಿಲ್ಲ: ಎಂಜಿನಿಯರ್‌

ಪ್ರೊಟೆಕ್ಷನ್ ವಾಲ್‌ನ ತಳದ ಸ್ವಲ್ಪ ಭಾಗ ಕುಸಿತದಿಂದ ಆತಂಕವಿಲ್ಲ. ಅಲ್ಲಿ ಸದ್ಯ ಮರಳು ಚೀಲ ಇರಿಸಿ, ವಾಲ್‌ಗೆ ಅಪಾಯ ಆಗದಂತೆ ನೋಡಿಕೊಳ್ಳಲಾಗುವುದು. ಗುಡ್ಡದ ಮೇಲೆ ಆಳಕ್ಕೆ ಬೇರು ಬಿಡುವ ಹುಲ್ಲು ನೆಡಲಾಗಿದೆ. ಅದು ದೃಢವಾಗಿ ಬೆಳೆದ ಬಳಿಕ ಮೇಲಿನಿಂದ ಮಣ್ಣು ಕುಸಿಯುವುದು ನಿಲ್ಲಲಿದೆ ಎಂದು ಐಆರ್‌ಬಿ ಕಂಪನಿ ಯೋಜನಾ ವ್ಯವಸ್ಥಾಪಕ ಯೋಗೇಂದ್ರಪ್ಪ ಹೇಳಿದರು.

ಗುಡ್ಡವನು ಇಳಿಜಾರು ಮಾಡಿರುವುದರಿಂದ ಮತ್ತು ಅತ್ಯಂತ ಸೂಕ್ಮ ಭಾಗದಲ್ಲಿ ಪ್ರೊಟೆಕ್ಷನ್ ವಾಲ್ ನಿರ್ಮಾಣ ಮಾಡಿರುವುದರಿಂದ ಆತಂಕ ಪುನರಾವರ್ತನೆ ಆಗಲ್ಲ
- ಎನ್‌. ಎ. ಬಿಲ್ಲವ, ಉಪ್ಪುಂದದ ಉದ್ಯಮಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.