ADVERTISEMENT

ಕಡಲ್ಕೊರೆತ: ಕಾಮಗಾರಿಗೆ ವಾರದ ಗಡುವು

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 11:05 IST
Last Updated 17 ಜೂನ್ 2011, 11:05 IST
ಕಡಲ್ಕೊರೆತ: ಕಾಮಗಾರಿಗೆ ವಾರದ ಗಡುವು
ಕಡಲ್ಕೊರೆತ: ಕಾಮಗಾರಿಗೆ ವಾರದ ಗಡುವು   

ಉಡುಪಿ: ಕಡಲ್ಕೊರೆತದ ಸಮಸ್ಯೆ ತೀವ್ರವಾಗಿರುವ ಪ್ರದೇಶದಲ್ಲಿ ವಾರದೊಳಗೆ ಕಡಲ್ಕೊರೆತ ತಡೆ ಕಾಮಗಾರಿ ಕೈಗೊಳ್ಳುವಂತೆ ಸಂಸದ ಡಿ.ವಿ.ಸದಾನಂದ ಗೌಡ ಅಧಿಕಾರಿಗಳಿಗೆ  ಸೂಚಿಸಿದ್ದಾರೆ.

ಕನಕೋಡ-ಪಡುಕೆರೆ ಪ್ರದೇಶದಲ್ಲಿ ತೀವ್ರಗೊಂಡಿರುವ ಕಡಲ್ಕೊರೆತದ ಹಾವಳಿಯನ್ನು ಗುರುವಾರ ವೀಕ್ಷಿಸಿದರು. ಈ ಪ್ರದೇಶದಲ್ಲಿ 200ರಿಂದ 300 ಮೀಟರ್‌ಗಳಷ್ಟು ಪ್ರದೇಶ ಕಡಲ್ಕೊರೆತಕ್ಕೊಳಗಾಗಿದೆ. ಕಲ್ಲಿನ ತಡೆಯೊಡ್ಡಿ ಕೊರೆತ ತಡೆಯುವ ಕೆಲಸ ಶೀಘ್ರ ಆಗಬೇಕು. ವಿಳಂಬ ಮಾಡಿದಷ್ಟು ಸಮಸ್ಯೆ ಹೆಚ್ಚಲಿದೆ. ಕಡಲ್ಕೊರೆತಕ್ಕೆ ತುತ್ತಾದ ಇನ್ನುಳಿದ ಕಡೆಗಳ್ಲ್ಲಲೂ ನಿಗಾವಹಿಸಿ ಕಾಮಗಾರಿ ಕೈಗೊಳ್ಳುವಂತೆ ಅವರು ಸೂಚಿಸಿದರು.

ಬಾಕಿ ಹಣ ಪಾವತಿಗೆ ಕ್ರಮ:`ಕಳೆದ ಬಾರಿ ಕಡಲ್ಕೊರೆತಕ್ಕೆ ಲೋಡ್‌ಗಟ್ಟಲೆ ಸೈಜುಗಲ್ಲುಗಳನ್ನು ತಂದು ಹಾಕಿದ್ದ ಗುತ್ತಿಗೆದಾರರಿಗೆ ಹಣ ಪಾವತಿಯಾಗಿಲ್ಲ ಎನ್ನುವ ಮಾಹಿತಿ ತಮಗೆ ಈಗಷ್ಟೇ ಲಭ್ಯವಾಗಿದೆ. ಜಿಲ್ಲಾಧಿಕಾರಿ ಜತೆಗೂ ಈ ಬಗ್ಗೆ ಚರ್ಚಿಸುತ್ತೇನೆ. ಪಾವತಿಗೆ ಬಾಕಿ ಇರುವ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸುತ್ತೇನೆ. ಅಲ್ಲದೇ ಈಗ ನಡೆಯಬೇಕಾದ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡುವಂತೆ ಸೂಚಿಸುತ್ತೇನೆ~ ಎಂದರು.

ಇಂದು ಸಭೆ:ಜಿಲ್ಲೆಯ ಕಡಲ್ಕೊರೆತ ಸಮಸ್ಯೆಗಳ ಕುರಿತು ಚರ್ಚಿಸಲು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ ಎಂದು ಸಂಸದರು ಸುದ್ದಿಗಾರರಿಗೆ ತಿಳಿಸಿದರು.

`ಉಳ್ಳಾಲದಿಂದ ಕಾರವಾರದವರೆಗೆ ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆ ನಿರ್ಮಿಸಲು ಈಗಾಗಲೇ ಅಂದಾಜು ರೂ 972 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರಕಿದೆ. ಅದರಲ್ಲಿ 273 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಟೆಂಡರ್ ಕೂಡ ಆಗಿದೆ. 2018ರ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು, ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ~ ಎಂದರು.

ಜಿ.ಪಂ.ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬಂದರು ಇಲಾಖೆ ಸಹಾಯಕ ಎಂಜಿನಿಯರ್ ಜಗದೀಶ್ ಭಟ್ ಇದ್ದರು.
 

`ಮಳೆಗಾಲದಲ್ಲಿ ಬರ್ತಾರೆ~

ಸಂಸದರು ಕೆಲವು ಅಧಿಕಾರಿಗಳೊಂದಿಗೆ ಕಡಲ್ಕೊರೆತ ವೀಕ್ಷಣೆಗೆ ಬಂದ್ದ್ದಿದಾಗ ಹಲವು ಸ್ಥಳೀಯರು ಕೂಡ ಅಲ್ಲಿಗೆ ಆಗಮಿಸಿದ್ದರು. ಮಳೆಗಾಲ ಬಂದು ಕಡಲ್ಕೊರೆತ ಕಾಣಿಸಿಕೊಂಡಾಗ ಮಾತ್ರ ಸ್ಥಳಕ್ಕೆ ಆಗಮಿಸುವ ಜನಪ್ರತಿನಿಧಿಗಳ ಬಗ್ಗೆ ಸ್ಥಳಿಯರಲ್ಲಿ ಅಸಮಾಧಾನವಿತ್ತು.

`ಪ್ರತಿ ವರ್ಷ ಮಳೆಗಾಲದಲ್ಲಿ ಈ ಜನಪ್ರತಿನಿಧಿಗಳು ಇಲ್ಲಿಗೆ ಬರುತ್ತಾರೆ. ಹಾಗೆ ಮಾಡಬೇಕು, ಹೀಗೆ ಮಾಡಬೇಕಿತ್ತು ಎಂದು ಹೇಳಿಕೆ ಕೊಡುತ್ತಾರೆ. ಬಳಿಕ ಅಧಿಕಾರಿಗಳು ಲಾರಿಗಟ್ಟಲೆ ಕಲ್ಲು ತಂದು ಸುರಿಯುತ್ತಾರೆ. ಮಳೆಗಾಲ ಕಳೆಯುವಷ್ಟರಲ್ಲಿ ಅವೆಲ್ಲ ಕೊಚ್ಚಿಹೋಗುತ್ತವೆ. ಇಂಥವನ್ನು ನೋಡಿ ನೋಡಿ ಬೇಸರವಾಗಿದೆ~ ಎಂದು ಸ್ಥಳಿಯ ನಿವಾಸಿ ಕರುಣಾಕರ ಕೋಟ್ಯಾನ್ `ಪ್ರಜಾವಾಣಿ~ಗೆ ಜತೆ ಅಸಮಾಧಾನ ತೋಡಿಕೊಂಡರು. ಸ್ಥಳದಲ್ಲಿದ್ದ ಇನ್ನೂ ಹಲವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.