ADVERTISEMENT

ಕಾಂಗ್ರೆಸ್– ಬಿಜೆಪಿ ಗೆಲುವಿನ ಹಾವು ಏಣಿ ಆಟ

1999ರ ನಂತರ ಕಾರ್ಕಳದಲ್ಲಿ ಕೈ– ಕಮಲ ಪೈಪೋಟಿ

ಎಂ.ನವೀನ್ ಕುಮಾರ್
Published 3 ಏಪ್ರಿಲ್ 2018, 14:07 IST
Last Updated 3 ಏಪ್ರಿಲ್ 2018, 14:07 IST
ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ   

ಉಡುಪಿ: ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಕಾರ್ಕಳಕ್ಕಿದೆ. ಇದೇ ಕ್ಷೇತ್ರದಿಂದ ಸತತ ಆರು ಬಾರಿ ಜಯ ಸಾಧಿಸಿದ್ದ ಹಾಲಿ ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಎಂ. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿ ನಾಡನ್ನು ಮುನ್ನಡೆಸಿದ್ದು ಈಗ ಇತಿಹಾಸ. ಕಾರ್ಕಳ ವಿಧಾನಸಭಾ ಚುನಾವಣಾ ಇತಿಹಾಸವನ್ನು ನೋಡಿದರೆ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳ ವಿರುದ್ಧ ಹೋರಾಟ ನಡೆದಿರುವುದು ಸ್ಪಷ್ಟವಾಗುತ್ತದೆ.

ಒಟ್ಟು 9 ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರೆ, ಬಿಜೆಪಿ 2 ಬಾರಿ, ಪ್ರಜಾ ಸೋಷಿಯಲಿಸ್ಟ್ ಪಕ್ಷ ಹಾಗೂ ಭಾರತೀಯ ಜನ ಸಂಘದ ಅಭ್ಯರ್ಥಿಗಳು ತಲಾ ಒಂದೊಂದು ಬಾರಿ ವಿಜಯ ಮಾಲೆ ಧರಿಸಿದ್ದಾರೆ.ಈಗಂತೂ ಈ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದೆ. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್. ಗೋಪಾಲ ಭಂಡಾರಿ ಜಯ ಗಳಿಸಿದರೆ, ನಂತರ 2004ರ ಚುನಾವಣೆಯಲ್ಲಿ ವಿಧಾನಸಭೆಯ ಹಾಲಿ ವಿರೋಧ ಪಕ್ಷದ ಮುಖ್ಯ ಸಚೇತಕ ವಿ. ಸುನೀಲ್ ಕುಮಾರ್ ಗೆಲುವು ಸಾಧಿಸಿದ್ದರು. 2008ರಲ್ಲಿ ಮತ್ತೆ ಗೋಪಾಲ ಭಂಡಾರಿ ಜಯ ಗಳಿಸಿದ್ದರು. ಆದರೆ ಆ ನಂತರ 2013ರಲ್ಲಿ ನಡೆದ ಚುನಾವಣೆಯಲ್ಲಿ ಸುನೀಲ್ ಕುಮಾರ್ ಅವರು ಗೋಪಾಲ ಭಂಡಾರಿ ಅವರನ್ನು ಸೋಲಿಸಿದ್ದರು.

ಈ ಇಬ್ಬರೂ ನಾಯಕರು ಜಯ ಗಳಿಸಿದ ಸಂದರ್ಭದಲ್ಲಿ ಗೆಲುವಿನ ಅಂತರ 10 ಸಾವಿರ ದಾಟಿಲ್ಲ ಎಂಬುದು ಈ ಕ್ಷೇತ್ರದಲ್ಲಿ ಇರುವ ಪೈಪೋಟಿಗೆ ಸಾಕ್ಷಿ. ಕಳೆದ ಬಾರಿ ಬಿಜೆಪಿ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಸುನೀಲ್ ಕುಮಾರ್ ಅವರು 4,254 ಮತಗಳ ಅಂತರದ ಜಯ ದಾಖಲಿಸಿದ್ದರು.

ADVERTISEMENT

1994ರ ಚುನಾವಣೆಯ ನಂತರ ವೀರಪ್ಪ ಮೊಯಿಲಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿಲ್ಲ. ಆದರೆ ಕಾರ್ಕಳದ ಸಂಬಂಧವನ್ನು ಅವರು ಕಳೆದುಕೊಂಡಿಲ್ಲ. ಇದೊಂದು ಕ್ಷೇತ್ರದ ಮಟ್ಟಿಗೆ ಅವರೇ ಹೈಕಮಾಂಡ್‌ ಎಂಬುದು ಜನರ ಅಂಬೋಣ. ಈ ಬಾರಿ ತಮ್ಮ ಮಗ ಹರ್ಷ ಮೊಯಿಲಿ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದ ಅವರು ಅದರಲ್ಲಿ ಯಶಸ್ಸು ಕಾಣಲಿಲ್ಲ. ಟಿಕೆಟ್ ಬೇಡ ಎಂದು ಅವರೇ ಪಕ್ಷಕ್ಕೆ ಹೇಳಿದ್ದಾರೆ. ಮೊಯಿಲಿ ಅವರ ಆಶೀರ್ವಾದದಿಂದಲೇ ಗೋಪಾಲ ಭಂಡಾರಿ ಅವರಿಗೆ ಟಿಕೆಟ್ ಸಿಗುತ್ತಿತ್ತು ಎಂಬುದು ಸತ್ಯ. ಈ ಬಾರಿ ಭಂಡಾರಿ ಮತ್ತು ಉದಯ ಶೆಟ್ಟಿ ಅವರ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಇದೆ.

ಕಾರ್ಕಳ ಜೈನರ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಕಾರ್ಕಳದ ಗೊಮ್ಮಟಬೆಟ್ಟದ ಬಾಹುಬಲಿಯನ್ನು ನೋಡಲು ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಚತುರ್ಮುಖ ಬಸದಿ, ವರಂಗ ಕೆರೆ ಬಸದಿ, ಕೂಡ್ಲು ಜಲಪಾತ, ವೆಂಕಟರಮಣ ದೇವಸ್ಥಾನ, ಸೀತಾನದಿ ನಿಸರ್ಗ ಧಾಮ ಇದೆ. ಶಿರ್ಲಾಲು ಬಸದಿ ಪ್ರವಾಸಿಗರನ್ನು ಸೆಳೆಯುತ್ತವೆ.

ಕೃಷಿ, ತೋಟಗಾರಿಕೆ ಪ್ರಮುಖ ಕಸುಬಾಗಿದೆ. ಗೋಡಂಬಿ ಕಾರ್ಖಾನೆಯಲ್ಲಿಯೂ ಸಾವಿರಾರು ಜನರು ಕೆಲಸ ಮಾಡುತ್ತಾರೆ. ಬೀಡಿ ಕಾರ್ಮಿಕರು ಸಹ ಇದ್ದಾರೆ. ಗುಡಿ ಕೈಗಾರಿಕೆಗಳೂ ಗಣನೀಯ ಸಂಖ್ಯೆಯಲ್ಲಿ ಇವೆ. ದಟ್ಟ ಅರಣ್ಯದ ಮಧ್ಯೆ ಪುಟ್ಟ ಗ್ರಾಮಗಳು ಇರುವುದರಿಂದ ಮೂಲ ಸೌಕರ್ಯಗಳ ಸಮಸ್ಯೆ ಇದೆ.

ಕಾರ್ಕಳ ವಿಧಾನಸಭಾ ಕ್ಷೇತ್ರದ ಹಿಂದಿನ ಪ್ರತಿನಿಧಿಗಳು ಹಾಗೂ ಪರಾಭವಗೊಂಡವರ ವಿವರ (ಬಿಜೆಎಸ್‌- ಭಾರತೀಯ ಜನ ಸಂಘ, ಜೆಎನ್‌ಪಿ- ಜನತಾ ಪಾರ್ಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.