ADVERTISEMENT

ಕಾರ್ಕಳ ಪುರಸಭೆ ಸಾಮಾನ್ಯ ಸಭೆ...

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 8:10 IST
Last Updated 1 ಜೂನ್ 2011, 8:10 IST

ಕಾರ್ಕಳ (ಬಜಗೋಳಿ): ನಗರದ ಬೀದಿ ದೀಪ ನಿರ್ವಹಣೆ ಸಮರ್ಪಕವಾಗಿಲ್ಲ. ಈ ಕುರಿತು ನಾಗರಿಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇವುಗಳ ಸಮರ್ಪಕ ನಿರ್ವಹಣೆಗೆ ತುರ್ತು ಕ್ರಮಕೈಗೊಳ್ಳಬೇಕು ಎಂದು ಪುರಸಭೆಯ ಸದಸ್ಯರು ಮಂಗಳವಾರ ನಡೆದ ಮಾಸಿಕ ಸಭೆಯಲ್ಲಿ ಒತ್ತಾಯಿಸಿದರು.

ಪೂರ್ವನಿಗದಿಯಂತೆ ಈ ಬಾರಿ ಕಾರ್ಕಳ ಪ್ರವಾಸಿ ಮಂದಿರದಲ್ಲಿ ನಡೆದ ಸಾಮಾನ್ಯ ಸಭೆ ಮಳೆಗಾಲ ಸಮೀಪಿಸಿದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ತುರ್ತಾಗಿ ನಡೆಯಬೇಕಾದ ವ್ಯವಸ್ಥೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿತು.

ಮಳೆ ನೀರು ಹರಿಯುವ ನಗರದ ಮುಖ್ಯ ಕಾಲುವೆಗಳನ್ನು ಸ್ವಚ್ಛಗೊಳಿಸಿ ಹರಿವು ಸರಾಗಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ರಸ್ತೆ ವಿಸ್ತರಣೆ ನಡೆಯುತ್ತಿರುವ ಮುಖ್ಯರಸ್ತೆಯಲ್ಲಿ ಹಳ್ಳ ದಿಣ್ಣೆಗಳನ್ನು ಸರಿಪಡಿಸಲಾಗುವುದು. 

ಮಳೆ ನೀರು ನಿಲ್ಲುವ ಸಾಧ್ಯತೆಯಿರುವ ಕಡೆ ಕಾಂಕ್ರೀಟ್ ಒಳಚರಂಡಿ ನಿರ್ಮಿಸಿ ರಸ್ತೆ ಮೇಲೆ ಪ್ರವಾಹದ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಭರವಸೆ ನೀಡಿದರು.

ಕಂದಾಯ ಇಲಾಖೆ ಸಮೀಕ್ಷೆ ನಡೆಸಿ ಗುರುತು ಹಾಕಿಕೊಟ್ಟ ಸ್ಥಳಗಳನ್ನು ಮಾತ್ರ ರಸ್ತೆ ವಿಸ್ತರಣೆ ಸಂದರ್ಭ ಸ್ವಾಧೀನಪಡಿಸಿ ತೆರವುಗೊಳಿಸಲಾಗಿದೆ. ಸ್ವಇಚ್ಛೆಯಿಂದ, ಎಲ್ಲರ ಒಪ್ಪಿಗೆ ಪಡೆದು ರಸ್ತೆ ವಿಸ್ತರಣೆ ಕಾರ್ಯ ನಡೆದಿದೆ. ತೆರವಿಗೆ ಮುನ್ನ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ರಸ್ತೆ ವಿಸ್ತರಣೆಯಲ್ಲಿ ಆತಿಕ್ರಮಣವಿರಲಿ, ಸ್ವಂತ ಸ್ಥಳವಿರಲಿ, ಜಮೀನು ತೆರವುಗೊಳಿಸಿದವರಿಗೆ ತಾರತಮ್ಯವಿಲ್ಲದೆ ಪರ್ಯಾಯ ವ್ಯವಸ್ಥೆ ಒದಗಿಸಬೇಕೆಂದು ರವೀಂದ್ರ ಮೊಯಿಲಿ ಒತ್ತಾಯಿಸಿದರು.
ರಸ್ತೆ ಡಾಂಬರೀಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರೈಸುತ್ತಿಲ್ಲ.
 
ಪುರಸಭೆಯಿಂದ ಕಾಮಗಾರಿ ಬಿಲ್ ಪಾವತಿಯಾಗಿಲ್ಲ ಎಂಬುದಾಗಿ ನೆಪ ಹೇಳುತ್ತಾರೆ ಎಂದು ಸದಸ್ಯ ರಮೇಶ ಕುಮಾರ್ ಗಮನ ಸೆಳೆದರು. ಕಾರ್ಕಳ ಪುರಸಭೆಯ ವಿವಿಧ ವಾರ್ಡ್‌ಗಳ ರಸ್ತೆಗಳಿಗೆ 8 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ನಡೆದಿದೆ. ಪುರಸಭೆ ಗುತ್ತಿಗೆದಾರರಿಗೆ ನೀಡಬೇಕಾದ ಹಣ ಬಾಕಿ ಇರಿಸಿಕೊಂಡಿಲ್ಲ ಎಂದು ಮುಖ್ಯಾಧಿಕಾರಿ ತಿಳಿಸಿದರು.

ಗುತ್ತಿಗೆದಾರರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪುರಸಭಾ ಅಧ್ಯಕ್ಷೆ ಪ್ರತಿಮಾ, ಉಪಾಧ್ಯಕ್ಷೆ ಪ್ರೇಮಾ ಆಚಾರ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಮೊಯಿಲಿ ಇದ್ದರು.

ಸ್ಥಾಯಿ ಸಮಿತಿ ಆಯ್ಕೆ:
ಪುರಸಭೆಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಹಿರಿಯಂಗಡಿ ವಾರ್ಡ್‌ನ ಸದಸ್ಯ ಶಿವಾಜಿ ರಾವ್ ಅವಿರೋಧವಾಗಿ ಆಯ್ಕೆಯಾದರು.ಮಂಗಳವಾರ ನಡೆದ ಸಭೆಯಲ್ಲಿ ಸಮಿತಿಯ ಸದಸ್ಯರಾಗಿ ಸುನಿಲ್ ಕೋಟ್ಯಾನ್, ರತ್ನಾವತಿ ನಾಯಕ್, ಪ್ರಕಾಶ್ ರಾವ್, ಗಾಯತ್ರಿ, ನಳಿನಿ ಆಚಾರ್, ಶುಭದಾ ರಾವ್, ಮೊಹಮದ್ ಶರೀಫ್ ಅವರನ್ನು ಆರಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.