ADVERTISEMENT

ಕಾರ್ಮಿಕರ ವಿರೋಧಿ ಧೋರಣೆ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 8:43 IST
Last Updated 7 ಜೂನ್ 2017, 8:43 IST
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವಿಳಂಬ ನೀತಿ ಖಂಡಿಸಿ ಆಲ್‌ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಸದಸ್ಯರು ಉಡುಪಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವಿಳಂಬ ನೀತಿ ಖಂಡಿಸಿ ಆಲ್‌ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಸದಸ್ಯರು ಉಡುಪಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.   

ಉಡುಪಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವಿಳಂಬ ನೀತಿ ಖಂಡಿಸಿ ಆಲ್‌ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ  (ಎಐಟಿಯುಸಿ)ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಸದಸ್ಯರು ಮತ್ತು ಕಾರ್ಮಿಕರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ಕಾರ್ಯ ದರ್ಶಿ ಎಚ್‌.ವಿ. ರಾವ್‌, ‘ಭವಿಷ್ಯ ನಿಧಿ ಸಂಘಟನೆಯು ಕಾರ್ಮಿಕರ ವಿರೋಧಿ ಧೋರಣೆ ತಳೆದಿದ್ದು, ಭವಿಷ್ಯ ನಿಧಿ ಹಣವನ್ನು ವಾಪಸ್‌ ಪಡೆಯಲು ಪರದಾ ಡಬೇಕಾದಂತಹ ಸ್ಥಿತಿ ಇದೆ.  ಪಿಂಚಣಿ ಅರ್ಜಿಯನ್ನು ಸಹ ಕಾಲಮಿತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ.

ಎಲ್ಲದಕ್ಕೂ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಲಾಗಿದೆ. ಆಧಾರ್ ಕಾರ್ಡ್‌ನಲ್ಲಿರುವ ಮತ್ತು ಈಗಾಗಲೇ ನೀಡಿರುವ ಜನ್ಮ ದಿನಾಂಕದಲ್ಲಿ ವ್ಯತ್ಯಾಸ ಇರುವ ಪ್ರಕರಣಗಳು ಇದ್ದೂ, ಅದನ್ನು ಸರಿಪಡಿಸಿ ಎಂದು ಅರ್ಜಿ ನೀಡಿದರೂ ಪ್ರಯೋಜನ ಆಗುತ್ತಿಲ್ಲ ಎಂದರು.

ADVERTISEMENT

ಪ್ರಸ್ತುತ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದ್ದು ಮಾಸಿಕ ಪಿಂಚಣಿಯನ್ನು ಕನಿಷ್ಠ ₹6,000 ನೀಡಬೇಕು. ನೌಕರರ ತುಟ್ಟಿಭತ್ಯೆ ಏರಿಕೆಗೆ ಅನುಗುಣವಾಗಿ ಪಿಂಚಣಿಯನ್ನು ಸಹ ಹೆಚ್ಚಿಸಬೇಕು. ಕಾರ್ಮಿಕ ಸಂಘಟನೆಗ ಳನ್ನು ಕಡೆಗಣಿಸದೆ ಮನ್ನಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಆಧಾರ್ ಕಾರ್ಡ್ ಇಲ್ಲದವರಿಗೆ ಸಾಮಾಜಿಕ ಯೋಜನೆಗಳ ಪ್ರಯೋಜ ನವನ್ನು ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ನಿರ್ದೇಶನ ನೀಡಿದ್ದರೂ ಕೇಂದ್ರ ಸರ್ಕಾರ ಅದನ್ನು ಪಾಲಿಸುತ್ತಿಲ್ಲ. ಭವಿಷ್ಯ ನಿಧಿ, ಪಿಂಚಣಿಗೂ ಆಧಾರ್ ಕಾರ್ಡ್‌ ಕಡ್ಡಾಯ ಮಾಡಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಆಧಾರ್ ಕಾರ್ಡ್‌ ಅನ್ನು ಬಲವಾಗಿ ವಿರೋಧಿಸಿತ್ತು, ಆದರೆ, ಅಧಿಕಾರಕ್ಕೆ ಬಂದ ನಂತರ ಎಲ್ಲದಕ್ಕೂ ಆಧಾರ್ ಕಾರ್ಡ್‌ ಕಡ್ಡಾಯ ಮಾಡುವ ಮೂಲಕ ಜನರಿಗೆ ತೊಂದರೆ ನೀಡುತ್ತಿದೆ ಎಂದರು. ಎಐಟಿಯುಸಿ ಮುಖಂಡರಾದ ವಿ. ಕುಕ್ಯಾನ್‌, ಕೆ.ವಿ. ಭಟ್‌, ಆನಂದ ಪೂಜಾರಿ. ರಾಮ ಮೂಲ್ಯ ಶಿರ್ವ, ಸುಮತಿ ಶೆಟ್ಟಿ, ಸಂಜೀವ ಶೇರಿಗಾರ್, ಅಪ್ಪ ಶೆಟ್ಟಿಗಾರ್ ಇದ್ದರು.

* * 

ವಿರೋಧ ಪಕ್ಷದಲ್ಲಿದ್ದಾಗ ಆಧಾರ್ ವಿರೋಧಿಸಿದ್ದ ಬಿಜೆಪಿ ಈಗ ಅದನ್ನು ಎಲ್ಲದಕ್ಕೂ ಕಡ್ಡಾಯ ಮಾಡುತ್ತಿದೆ. ಊಟ ಮಾಡಲು ಆಧಾರ್ ತೋರಿಸಬೇಕಾಗುತ್ತದೆ.
ಎಚ್.ವಿ. ರಾವ್, ಎಐಟಿಯುಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.