ADVERTISEMENT

ಕುಡಿಯವ ನೀರಿಗೆ ಪರದಾಟ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 9:00 IST
Last Updated 21 ಏಪ್ರಿಲ್ 2011, 9:00 IST
ಕುಡಿಯವ ನೀರಿಗೆ ಪರದಾಟ: ಪ್ರತಿಭಟನೆ
ಕುಡಿಯವ ನೀರಿಗೆ ಪರದಾಟ: ಪ್ರತಿಭಟನೆ   

ಬಜತ್ತೂರು(ಉಪ್ಪಿನಂಗಡಿ):  ಕಳೆದ 8 ದಿನಗಳಿಂದ ಕುಡಿಯುವ ನೀರು ಸರಬರಾಜು ಆಗದೆ ಸಮಸ್ಯೆ ಎದುರಾಗಿದ್ದು,  ತಕ್ಷಣದಿಂದಲೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಬಜತ್ತೂರು ಗ್ರಾಮದ ನೀರಕಟ್ಟೆ ಮತ್ತು ಟಪ್ಪಾಲುಕೊಟ್ಟಿಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

 ರಾಜೀವ ಗಾಂಧಿ ಕುಡಿಯುವ ನೀರಿನ ಫಲಾನುಭವಿಗಳಾಗಿ ನೀರಿನ ಸಂಪರ್ಕ ಪಡೆದುಕೊಂಡಿರುತ್ತೇವೆ. ನೀರಕಟ್ಟೆ, ಟಪ್ಪಾಲುಕೊಟ್ಟಿಗೆ ವ್ಯಾಪ್ತಿಯ 100ಕ್ಕೂ ಅಧಿಕ ಮನೆಯವರು ಇದನ್ನೇ ಅವಲಂಭಿಸಿರುತ್ತೇವೆ. ಕಳೆದ 8 ದಿನಗಳಿಂದ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಗ್ರಾಮ ಪಂಚಾಯಿತಿ ಕಚೇರಿಗೆ ದೂರು ಸಲ್ಲಿಸಿದರೆ ಕೇಳುವವರೇ ಇಲ್ಲದಂತಾಗಿದೆ ಎಂದು ಆರೋಪಿಸಿ ಬೆಳಿಗ್ಗೆಯಿಂದಲೇ ಬಿಂದಿಗೆ ಸಮೇತ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

 ಸ್ಥಳೀಯ ಸಹಕಾರಿ ಧುರೀಣ ಮಾಣಿಕ್ಯರಾಜ್‌ ಪಡಿವಾಳ್‌ ಮತ್ತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಹಮದ್‌ ಬಾವಾ ನೇತೃತ್ವದಲ್ಲಿ ಜಮಾಯಿಸಿದ ಗ್ರಾಮಸ್ಥರು 8 ದಿನಗಳಿಂದ ನೀರು ಬರುತ್ತಿಲ್ಲ ಎಂದು ದೂರು ಸಲ್ಲಿಸಿದರೂ ಗ್ರಾಮ ಪಂಚಾಯಿತಿ ಆಡಳಿತ ಪೂರಕವಾಗಿ ಸ್ಪಂದಿಸದೆ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. 

 ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷ ಗಣೇಶ್‌, ಸದಸ್ಯರಾದ ಅನ್ವರ್‌ ಸಾದತ್‌, ಅನಿತಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಅಹವಾಲು ಸ್ವೀಕರಿಸಿ ನಾಳೆಯಿಂದ ಸಮಸ್ಯೆ ಪರಿಹಾರ ಆಗಲಿದೆ ಎಂದರು.

ಇದಕ್ಕೆ ಸಮ್ಮತಿಸದ ಗ್ರಾಮಸ್ಥರು ತಕ್ಷಣ    ನೀರಿನ ವ್ಯವಸ್ಥೆ ಮಾಡಬೇಕು, ಆ ವರೆಗೆ ಇಲ್ಲಿಂದ ನಾವು ಹೋಗಲಾರೆವು ಎಂದು ಪಟ್ಟು ಹಿಡಿದರು. ಬಳಿಕ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ವಾಹನದಲ್ಲಿ ನೀರು ಸರಬರಾಜು ಮಾಡುವ ಬಗ್ಗೆ      ಭರವಸೆ ನೀಡಿದ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದರು.

ವಿದ್ಯುತ್‌ ಸಮಸ್ಯೆಯಿಂದಾಗಿ ಹೀಗಾಯಿತು: ವಿದ್ಯುತ್‌ ಸಮಸ್ಯೆಯಿಂದಾಗಿ ನೀರಿನ ಟ್ಯಾಂಕ್‌ ತುಂಬುತ್ತಿಲ್ಲ. ಹೀಗಾಗಿ ನೀರು ಸರಬರಾಜು ಸಮಸ್ಯೆ ಆಗಿದೆ. ತಾತ್ಕಾಲಿಕ ಪರಿಹಾರವಾಗಿ ವಾಹನದ ಮೂಲಕ ನೀರು ಸರಬರಾಜು ಮಾಡುತ್ತೇವೆ. ಮುಂದೆ ಈ ಸಮಸ್ಯೆ ಪುನರಾವರ್ತನೆ ಆಗದಂತೆ ಶಾಸ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಣೇಶ್‌ ಅವರು ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ಗೆ ತಿಳಿಸಿದರು.

 ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಬೇಬಿ, ಗ್ರಾಮದ ಪ್ರಮುಖರಾದ ಅಬ್ಬಾಸ್‌, ಹಸನಬ್ಬ, ಗುಡ್ಡಪ್ಪ ಗೌಡ, ಶೀನಪ್ಪ ಗೌಡ, ಶಾಂತಪ್ಪ ಗೌಡ, ಇಸ್ಮಾಯಿಲ್‌, ಸರಸ್ವತಿ, ವಾರಿಜಾ, ಶಾಂಭವಿ ಅವರನ್ನೊಳಗೊಂಡಂತೆ ನೂರಾರು ಮಂದಿ ಇದ್ದರು. ಉಪ್ಪಿನಂಗಡಿ ಸಬ್‌ ಇನ್‌ಸ್ಪೆಕ್ಟರ್‌ ಜಿ.ಟಿ. ದಾಸರಿ ಮತ್ತು ಸಿಬ್ಬಂದಿ ಬಂದೋಬಸ್ತ್‌ನಲ್ಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.