ADVERTISEMENT

ಗಂಗೊಳ್ಳಿ ಗ್ರಾಮಸಭೆ: ಧರಣಿ, ಕೋಲಾಹಲ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:39 IST
Last Updated 5 ಸೆಪ್ಟೆಂಬರ್ 2013, 8:39 IST

ಗಂಗೊಳ್ಳಿ (ಬೈಂದೂರು):  ಇಲ್ಲಿನ ವೀರೇಶ್ವರ ಮಾಂಗಲ್ಯ ಮಂಟಪದಲ್ಲಿ ಮಂಗಳವಾರ ನಡೆದ ಗಂಗೊಳ್ಳಿ ಗ್ರಾಮಸಭೆ ಗದ್ದಲ ಕೋಲಾಹಲ, ಹಲ್ಲೆ ಯತ್ನ, ಧರಣಿ, ಕ್ಷಮಾಯಾಚನೆ ನಡುವೆ ಗೊಂದಲದ ಗೂಡಾಯಿತು.

ಒಂದು ಹಂತದಲ್ಲಿ ಮಾರ್ಗದರ್ಶಿ ಅಧಿಕಾರಿಯೇ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನು ನಿಂದಿಸಿ, ಅವರ ಮೇಲೆ ಹಲ್ಲೆಗೆ ಮುಂದಾಗಿ ಅಹಿತಕರ ವಾತಾವರಣ ಸೃಷ್ಟಿಸಿದ ಘಟನೆಯೂ ನಡೆಯಿತು.

ಸಾರ್ವಜನಿಕರು ಸಭೆಯ ಕಾರ್ಯ ಸೂಚಿಯನ್ನು ನಿರ್ಲಕ್ಷಿಸಿ ಆರಂಭ ದಲ್ಲಿಯೇ ಗ್ರಾಮದ ಸಮಸ್ಯೆಗಳನ್ನು ಎತ್ತಿದ್ದರಿಂದ ಸಭೆಯಲ್ಲಿ ಗೊಂದಲ ಉಂಟಾಯಿತು. ಇದರ ನಡುವೆ ಹಲವು ಮೀನುಗಾರ ಮಹಿಳೆಯರು ಐಸ್ ಬಾಕ್ಸ್ ಪಡೆಯಲು ಅರ್ಜಿ ಸಲ್ಲಿಸಲು ಮುಂದಾ ದಾಗ ಸಭೆ ನಿಯಂತ್ರಣ ಕಳೆದು ಕೊಂಡಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಅನಂತ ಮೊವಾಡಿ ಸಭೆಯಿಂದ ಹೊರ ನಡೆದರು. ಮಾರ್ಗದರ್ಶಿ ಅಧಿಕಾರಿಯಾಗಿದ್ದ ತಲ್ಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಣ್ಣ ಚಿಕ್ಕಯ್ಯ ತಾವೂ ಅವರನ್ನು ಅನುಸರಿಸಲು ಮುಂದಾದರು. ಅದನ್ನು ಗ್ರಾಮ ಪಂಚಾಯಿತಿ ಸದಸ್ಯ ಬಿ. ರಾಘವೇಂದ್ರ ಪೈ ಆಕ್ಷೇಪಿಸಿದಾಗ ಅವರು ಪೈ ಅವರನ್ನು ನಿಂದಿಸಿದ್ದಲ್ಲದೆ, ಹಲ್ಲೆಗೂ ಮುಂದಾದರು. ಇದನ್ನು ವಿರೋಧಿಸಿದ ಪೈ ಮತ್ತು ಅವರ ಬೆಂಬಲಿಗರು ಅಧಿಕಾರಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಸಭೆಯ ಮುಂಭಾಗದಲ್ಲಿ ಧರಣಿ ನಡೆಸಿದರು. ಕೊನೆಗೆ ಅವರು ಕ್ಷಮೆ ಯಾಚಿಸಿ ದರಲ್ಲದೆ, ಘಟನೆಯ ಬಗ್ಗೆ ಸಭೆ ಖಂಡನಾ ನಿರ್ಣಯ ಸ್ವೀಕರಿಸಿತು.

ಅನುಮತಿ ಪಡೆಯದೆ ಕಟ್ಟಡ ನಿರ್ಮಾಣವಾಗುತ್ತ್ದ್ದಿದು, ಪಂಚಾಯಿತಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು  ಸಂಘಟನೆಯೊಂದರ ಕಾರ್ಯಕರ್ತರಾದ ವಾಸುದೇವ, ರವೀಂದ್ರ ಕೊಠಾರಿ, ರತ್ನಾಕರ ಗಾಣಿಗ, ಮಣಿ ಖಾರ್ವಿ, ರಾಘವೇಂದ್ರ ಗಾಣಿಗ, ಮೋಹನ ಖಾರ್ವಿ, ಗಣೇಶ ಶೆಣೈ,  ಸುರೇಶ ಖಾರ್ವಿ ಆಕ್ಷೇಪವೆತ್ತಿದರು. ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಕಾರ್ಯದರ್ಶಿ ರಾಜೇಶ್ವರಿ ಚಂದಾವರ ಅಸಹಾಯಕತೆ ವ್ಯಕ್ತ ಪಡಿಸಿದಾಗ ಆಕ್ರೋಶಿತರಾದ ಅವರೆಲ್ಲ ಸಭೆ ಬಹಿಷ್ಕರಿಸಿ ಹೊರ ನಡೆದರು.

ಅರ್ಹರಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ, ಹಿಂದಿನಂತೆ ಸೀಮೆ ಎಣ್ಣೆ ವಿತರಣೆ, ಮೀನುಗಾರಿಕಾ ಸಹಕಾರ ಸಂಘದ ಪರಿಶಿಷ್ಟ ಜಾತಿ, ಪಂಗಡ ಸದಸ್ಯರಿಗೆ `ಎ' ವರ್ಗದ ಸದಸ್ಯತ್ವ ನೀಡಿಕೆ, ಅನಧಿಕೃತ ಬೀದಿ ದೀಪಗಳ ತೆರವು, ಮೆಸ್ಕಾಂ ಬಾಕಿ ಪಾವತಿ, ಕುಡಿಯುವ ನೀರು ಸಮಸ್ಯೆ ಕುರಿತು ಬೇಡಿಕೆಗಳು ಮಂಡಿಸಲ್ಪಟ್ಟುವು.

ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ಕುರಿತು ಚರ್ಚೆ ನಡೆಯಿತು. ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂತು.  

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾರದಾ ಶೇರುಗಾರ್, ಸದಸ್ಯರು, ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ, ಎಸ್‌ಐ ಎ. ಸಂಪತ್‌ಕುಮಾರ್, ಬಂದರು ಅಧಿಕಾರಿ ಕಿಶೋರ್‌ಕುಮಾರ್, ಗ್ರಾಮ ಕರಣಿಕ ರಾಘವೇಂದ್ರ ದೇವಾಡಿಗ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.