ADVERTISEMENT

ಘಟ್ಟ ಪ್ರದೇಶದಲ್ಲಿ ಭಾರಿ ಮಳೆ: ಬ್ರಹ್ಮಾವರದಲ್ಲಿ ನೆರೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 8:47 IST
Last Updated 5 ಜುಲೈ 2013, 8:47 IST
ಬ್ರಹ್ಮಾವರ ಸಮೀಪದ ಹಂದಾಡಿ ಪ್ರದೇಶದಲ್ಲಿ ಸೀತಾ ನದಿ ಉಕ್ಕಿ ಹರಿದು ಅನೇಕರು ದೋಣಿಯ ಆಶ್ರಯ ಪಡೆದರು
ಬ್ರಹ್ಮಾವರ ಸಮೀಪದ ಹಂದಾಡಿ ಪ್ರದೇಶದಲ್ಲಿ ಸೀತಾ ನದಿ ಉಕ್ಕಿ ಹರಿದು ಅನೇಕರು ದೋಣಿಯ ಆಶ್ರಯ ಪಡೆದರು   

ಬ್ರಹ್ಮಾವರ: ಕಳೆದೆರಡು ದಿನಗಳಿಂದ ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಬ್ರಹ್ಮಾವರ ಪರಿಸರದಲ್ಲಿ ಹರಿಯುವ ಮಡಿಸಾಲು ಮತ್ತು ಸೀತಾ ನದಿ ಪ್ರದೇಶ ದಲ್ಲಿ ಬುಧವಾರ ಮತ್ತು ಗುರುವಾರ ನೆರೆ ಹಾವಳಿ ಕಾಣಿಸಿಕೊಂಡಿದೆ.

ಉಪ್ಪೂರು, ಆರೂರು, ಹಂದಾಡಿ, ಬಾರ್ಕೂರು, ಬಾವಲಿಕುದ್ರು ಪ್ರದೇಶ ದಲ್ಲಿ ಅನೇಕ ಕೃಷಿ ಭೂಮಿ ನೆರೆಯಿಂದ ಜಲಾವೃತಗೊಂಡಿತ್ತು. ಬಂಡೀಮಠ, ಬಾವಲಿಕುದ್ರು ಮತ್ತು ಉಪ್ಪೂರು ಪ್ರದೇಶದ ಅನೇಕ ಮನೆಗಳಿಗೂ ನೆರೆ ನೀರು ನುಗ್ಗಿದೆಯಾದರೂ ಎಲ್ಲಿಯೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಉಪ್ಪೂರು ಹಿರಿಯ ಪ್ರಾಥಮಿಕ ಶಾಲೆಯ ಪರಿಸರದಲ್ಲಿ ಪ್ರವಾಹ ಬಂದ ಕಾರಣ ಶಾಲೆಗೆ ರಜೆ ಘೋಷಿಸಲಾಗಿತ್ತು. ಹಂದಾಡಿ ಪ್ರದೇಶದಲ್ಲಿ ಎರಡು ಮೂರು ದಿನಗಳ ಹಿಂದೆ ನಾಟಿ ಮಾಡಿದ ಗದ್ದೆಯಲ್ಲಿ ನೆರೆ ನೀರು ನಿಂತಿರುವುದರಿಂದ ಕೊಳೆಯುವ ಭೀತಿ ರೈತರನ್ನು ಕಾಡಿದೆ. ಪರಿಸರದಲ್ಲಿ ಗುರುವಾರ ಸಂಜೆಯ ವೇಲೆಗೆ ನೆರೆ ಇಳಿಮುಖವಾಗಿತ್ತು.

ಮುಳುಗಿದ ಸೇತುವೆಗಳು
ಹೆಬ್ರಿ:
ಹೆಬ್ರಿ ಪರಿಸರದಲ್ಲಿ ಮಂಗಳವಾರ ಮತ್ತು ಬುಧವಾರ ಸುರಿದ ಭಾರಿ ಮಳೆಯಿಂದ ಹೆಬ್ರಿಯ ಪವಿತ್ರ ಸೀತಾನದಿ ತುಂಬಿ ಹರಿಯುತ್ತಿದ್ದು, ರಸ್ತೆಯಂಚಿಗೆ ನೀರು ಹರಿದಿದೆ. ಬೃಹತ್ ಎಣ್ಣೆಹೊಳೆ, ಮಾತಿಬೆಟ್ಟು ಹೊಳೆ, ಜರವತ್ತು ಹೊಳೆ, ಶಿವಪುರ ನದಿ, ಕೆರ್ವಾಸೆ ಬಸ್ರಾಜೆ ಹೊಳೆ, ಕಡ್ತಲ ತೀರ್ಥಟ್ಟಿ ಹೊಳೆ, ಮಾಳ ಕೆಪ್ಲಡ್ಕ ಹೊಳೆ, ಕಾಡುಹೊಳೆ, ಸಾಣೂರು ಸೇರಿದಂತೆ ತಾಲ್ಲೂಕಿನ ವಿವಿಧ ನದಿ ಹೊಳೆಗಳು ತುಂಬಿ ಹರಿಯುತ್ತಿವೆ. ಕಾರ್ಕಳ ಮಾಳ ಮಂಜಲ್ತಾರ್, ಕಡ್ತಲದ ತೀರ್ಥಟ್ಟಿ ಮತ್ತು ತೆಳ್ಳಾರ್ ಮುಳುಗು ಸೇತುವೆಗಳು ತುಂಬಿ ಹರಿದು ಸಂಚಾರಕ್ಕೆ ತೊಡಕುಂಟಾಗಿದೆ.

ಸೌಪರ್ಣಿಕಾ ನೆರೆ ಇಳಿಮುಖ
ಬೈಂದೂರು:
ಇಲ್ಲಿನ ಪ್ರಮುಖ ನದಿ ಸೌಪರ್ಣಿಕೆಯಲ್ಲಿ ಬುಧವಾರ ಬಂದಿದ್ದ ಪ್ರವಾಹ ಗುರುವಾರ ಇಳಿಮುಖವಾಗಿದೆ. ಬುಧವಾರ ರಾತ್ರಿ ಮತ್ತು ಗುರುವಾರ ಹಗಲು ವಿರಳ ಮಳೆಯಾಗಿತ್ತು. ಗಾಳಿಯ ಆರ್ಭಟವೂ ಇರಲಿಲ್ಲ. 

ಬುಧವಾರ ನೆರೆಯ ನೀರಿನಿಂದ ಆವೃತವಾಗಿದ್ದ ಮನೆಗಳನ್ನು ತ್ಯಜಿಸಿ, ಬಂಧುಗಳ ಮನೆ ಸೇರಿದ್ದವರು ಗುರು ವಾರ ತಮ್ಮ ಮನೆಗಳಿಗೆ ವಾಪಸಾಗಿ ್ದದಾರೆ. ನೆರೆಯ ಕಾರಣದಿಂದ ಯಾವುದೇ ಅಪಾಯ ಸಂಭವಿಸಿದ ವರದಿಯಾಗಿಲ್ಲ.

ಶಾಸಕರಿಂದ ವೀಕ್ಷಣೆ: ಶಾಸಕ ಕೆ. ಗೋಪಾಲ ಪೂಜಾರಿ ಗುರುವಾರ ಪ್ರವಾಹ ಪೀಡಿತ ಪ್ರದೇಶಗಳಾದ ನಾವುಂದ, ಅರೆಹೊಳೆ, ಬಡಾಕೆರೆ, ಮರ ವಂತೆಗೆ ಭೇಟಿ ನೀಡಿ ಪರಿಶೀಲಿಸಿದರು. ತೊಂದರೆಗೊಳಗಾದವರೊಂದಿಗೆ ಮಾತ ನಾಡಿದರು. ಉಪವಿಭಾಗಾಧಿಕಾರಿಗಳಿಗೆ ದೂರವಾಣಿ ಕರೆಮಾಡಿ ನೆರೆ ಹಾವಳಿಯ ಹಾನಿಯ ಸಮೀಕ್ಷೆ ನಡೆಸಿ  ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.