ADVERTISEMENT

ಚಾಂತಾರು ಗ್ರಾ.ಪಂ: ರಸ್ತೆಯಲ್ಲೇ ತ್ಯಾಜ್ಯ !

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 4:55 IST
Last Updated 20 ಅಕ್ಟೋಬರ್ 2012, 4:55 IST

ಬ್ರಹ್ಮಾವರ: ನಿರ್ಮಲ ಗ್ರಾಮ ಪುರಸ್ಕಾರದ ಗರಿ ಹೊಂದಿರುವ ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಂಬೆ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತ್ಯಾಜ್ಯ ತೊಟ್ಟಿ ನಿರ್ಮಾಣ ಮಾಡಿದ್ದರೂ, ಪಂಚಾಯಿತಿಯ ಸಿಬ್ಬಂದಿಯೇ ತ್ಯಾಜ್ಯವನ್ನು ತೊಟ್ಟಿಯಲ್ಲಿ ಕಸವನ್ನು ಹಾಕುತ್ತಿಲ್ಲ.

ಬ್ರಹ್ಮಾವರ ಹೆಬ್ರಿ ರಾಜ್ಯ ಹೆದ್ದಾರಿಯ ಕೊಳಂಬೆ ಪ್ರದೇಶದಲ್ಲಿ ಕಳೆದ 10 ವರ್ಷಗಳ ಹಿಂದೆಯೇ ನಾಲ್ಕು ಲಕ್ಷ ರೂಪಾಯಿ ಅಂದಾಜಿನಲ್ಲಿ ತ್ಯಾಜ್ಯ ವಿಲೇವಾರಿಗೆ ತೊಟ್ಟಿಯೊಂದನ್ನು ನಿರ್ಮಿಸಲಾಗಿತ್ತು. ವಸತಿ ಪ್ರದೇಶದಲ್ಲಿ ತ್ಯಾಜ್ಯ ಎಸೆಯುವ ತೊಟ್ಟಿ ಬೇಡ ಎನ್ನುವ ಬಗ್ಗೆ ಸಾರ್ವಜನಿಕರಿಂದ ಹಲವು  ವಿರೋಧಗಳು ಇದ್ದರೂ ಕಳೆದ ಏಪ್ರಿಲ್‌ನಲ್ಲಿ ತೊಟ್ಟಿಗೆ ಹೋಗಲು ಸಾವಿರಾರು ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಿಸಲಾಯಿತು. ನಂತರ `ತ್ಯಾಜ್ಯ ನಿಷೇಧಿತ ಪ್ರದೇಶ~ ಎಂದು ಬ್ಯಾನರ್ ಕೂಡಾ ಕಟ್ಟಲಾಯಿತು.

ತೊಟ್ಟಿಯವರೆಗೆ ಹೋಗಲು ರಸ್ತೆ ನಿರ್ಮಿಸಿದಲ್ಲದೇ ಗೇಟನ್ನು ಸಹ ನಿರ್ಮಿಸಲಾಯಿತು. ಇಲ್ಲಿ ಕಸ
ಎಸೆದರೆ ದಂಡ ಕೂಡಾ ವಿಧಿಸಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷರು ಅಂದು ಹೇಳಿಕೆ ನೀಡಿದ್ದರು.

ಆದರೆ ಈಗ ಗೇಟು ಯಾವಾಗಲೂ ತೆರೆದುಕೊಂಡು ಇರುತ್ತದೆಯಲ್ಲದೇ, ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯವನ್ನೆಲ್ಲಾ ತಂದು ತೊಟ್ಟಿಗೆ ಹಾಕುವ ಬದಲು ರಸ್ತೆಯ ಮೇಲೆ ಸಿಬ್ಬಂದಿಗಳೇ ಸುರಿಯುತ್ತಿದ್ದಾರೆ. ಇಷ್ಟೆಲ್ಲಾ ಆದರೂ ದಿನನಿತ್ಯ ಇದೇ ದಾರಿಯಲ್ಲಿ ಸಂಚರಿಸುವ ಪಂಚಾಯಿತಿ ಅಧ್ಯಕ್ಷರಾಗಲೀ, ಸದಸ್ಯರಾಗಲೀ ಗಮನ ಹರಿಸಿಲ್ಲ ಎಂಬುದು ಸಾರ್ವಜನಿಕರ ದೂರು.

ಪಂಚಾಯಿತಿ ಸಿಬ್ಬಂದಿಗಳೇ ಹೀಗೆ ಮಾಡುವಾಗ, ನಾವೇಕೆ ಇಲ್ಲಿಯೇ ಎಸೆಯಬಾರದು ಎಂದು ಬ್ರಹ್ಮಾವರ ನಗರದ ಉದ್ಯಮಿಗಳು, ಮನೆಯವರು, ಬಹುಮಹಡಿ ಕಟ್ಟಡದವರು ತ್ಯಾಜ್ಯವನ್ನು (ಹೆದ್ದಾರಿ ಬದಿ) ಎಸೆದು ಹೋಗುತ್ತಿದ್ದಾರೆ.

ರೋಗಗಳಿಗೆ ಆಹ್ವಾನ: ಪ್ರತೀ ನಿತ್ಯ ಇದೇ ದಾರಿಯಲ್ಲಿ ಸಾವಿರಾರು ಮಂದಿ ಸಾಗುತ್ತಿದ್ದಾರೆ. ರಸ್ತೆ
ಬದಿಯಲ್ಲಿಯೇ ತ್ಯಾಜ್ಯ ಎಸೆಯುವ ಕಾರಣ ಈ ಪರಿಸರದಲ್ಲಿ ಮೂಗುಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ ನಾಯಿ, ದನಕರುಗಳು ಇಲ್ಲಿ ಎಸೆಯುವ ತ್ಯಾಜ್ಯವನ್ನು ತಿನ್ನುವುದಲ್ಲದೇ
ರಸ್ತೆಯ ಮೇಲೆ ಹಾಕುತ್ತಿವೆ. ಕೆಲವೊಮ್ಮೆ ಇಲ್ಲಿ ನಡೆದಾಡಲೂ ಅಸಹ್ಯವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. 

ಕೊಳಂಬೆ ಪ್ರದೇಶದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು, ತ್ಯಾಜ್ಯದಿಂದ ಅನೇಕ ರೋಗಗಳು ಬರುವ ಮುನ್ನ ಸ್ವಚ್ಛತಾ ಕ್ರಮಕ್ಕೆ ಪಂಚಾಯಿತಿ ಮುಂದಾಗಬೇಕಾಗಿದೆ ಮತ್ತು ತ್ಯಾಜ್ಯ ವಿಲೇವಾರಿಯ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.