ADVERTISEMENT

ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಮುಂಗಾರಿನ ಮೊದಲ ಮಳೆ ಸಂಭ್ರಮ– ಉಡುಪಿ, ದಿನವಿಡೀ ಸುರಿದ ಮಳೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 10:12 IST
Last Updated 30 ಮೇ 2018, 10:12 IST
ಉಡುಪಿಯಲ್ಲಿ ಮಂಗಳವಾರ ದಿನವಿಡೀ ಮಳೆ ಸುರಿಯಿತು.
ಉಡುಪಿಯಲ್ಲಿ ಮಂಗಳವಾರ ದಿನವಿಡೀ ಮಳೆ ಸುರಿಯಿತು.   

ಉಡುಪಿ: ಬಿಡುವು ನೀಡದೆ ದಿನವಿಡೀ ಸುರಿದ ಮೊದಲ ಮುಂಗಾರು ಮಳೆ ಅಕ್ಷರಶಃ ಜನ ಜೀವನವನ್ನು ಅಸ್ತವ್ಯಸ್ತವಾಗಿಸಿತು.

ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಆರಂಭವಾದ ಮಳೆ, ಆ ನಂತರ ಗುಡುಗು, ಸಿಡಿಲು ಸಮೇತ ಮುಂದುವರೆಯಿತು. ಬೆಳಿಗ್ಗೆ ಶಾಲೆಗೆ ಹೊರಟ್ಟಿದ್ದ ಮಕ್ಕಳು ಹೊರಗೆ ಕಾಲಿಡಲಾಗದೆ ತೊಂದರೆ ಅನುಭವಿಸಿದರು. ರಭಸದಿಂದ ಮಳೆ ಸುರಿದ ಕಾರಣ ಛತ್ರಿ ಹಿಡಿದುಕೊಂಡು ಸಹ ಹೋಗುವುದು ಸಹ ಅಸಾಧ್ಯವಾಗಿತ್ತು. ವಾಹನದಲ್ಲಿ ತೆರಳುವ ಮಕ್ಕಳು ಮಾತ್ರ ಶಾಲೆಗೆ ಬಂದ ದೃಶ್ಯ ಎಲ್ಲೆಡೆ ಕಂಡುಬಂತು. ನಗರದಲ್ಲಿ ಸಹ ಜನ ದಟ್ಟಣೆಯೇ ಇರಲಿಲ್ಲ. ಬೆಳಿಗ್ಗೆ 9 ಗಂಟೆ ಸುಮಾರಿಗೆ ಗಿಜುಗುಡುತ್ತಿದ್ದ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ವ್ಯಾಪಾರ ವಹಿವಾಟಿನ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಬೀರಿತು. ಹೋಟೆಲ್‌ಗಳು ಮಧ್ಯಾಹ್ನ ಖಾಲಿ ಹೊಡೆಯುತ್ತಿದ್ದವು. ಓಡಾಡಲು ಸಾಧ್ಯವಾಗದಿದ್ದರೆ ಜನರು ಪಕ್ಕದಲ್ಲೇ ಇರುವ ಯಾವುದಾದರೂ ಒಂದು ಹೋಟೆಲ್‌ನಲ್ಲಿ ಊಟ ಮಾಡುತ್ತಾರೆ. ಅಥವಾ ಸಂಜೆ ಮನೆಗೆ ಹೋಗುವ ಎಂದು ಸುಮ್ಮನಾಗುತ್ತಾರೆ. ಆದ್ದರಿಂದ ವ್ಯಾಪಾರ ತುಂಬಾ ಕಡಿಮೆ ಎಂದು ಬನ್ನಂಜೆ ಶಿರಿಬೀಡಿಯ ರುಚಿ ಹೋಟೆಲ್ ಮಾಲೀಕರು ಹೇಳಿದರು.

ADVERTISEMENT

ಮೇ ಮೊದಲ ವಾರ ಮತ್ತು ಆ ನಂತರವೂ ಆಗಾಗ್ಗೆ ಮಳೆಯಾಗಿತ್ತು. ಆದರೆ ಈ ಪ್ರಮಾಣದಲ್ಲಿ ಆಗಿರಲಿಲ್ಲ. ನಿರಂತರ ಮಳೆ ಇಡೀ ವಾತಾವರಣವನ್ನು ತಂಪಾಗಿಸಿದೆ. ವಾಯುಭಾರ ಕುಸಿತವಾಗಿರುವುದರಿಂದ ಬುಧವಾರವೂ ಮಳೆ ಮುಂದುವರೆ ಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಿಇನ್ನೆರಡು ದಿನ ಇದೇ ರೀತಿ ಮಳೆಯಾದರೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಲಿದೆ. ಉದ್ಯಾವರ, ಉಪ್ಪೂರು ಭಾಗದಲ್ಲಿ ನೆರೆ ಸಹ ಸೃಷ್ಟಿಯಾಗುವ ಸೂಚನೆ ಇದೆ.

ಬ್ರಹ್ಮಾವರದಲ್ಲಿ ಭಾರಿ ಗಾಳಿ– ಮಳೆ

ಬ್ರಹ್ಮಾವರ: ಕೋಟ, ಸಾಲಿಗ್ರಾಮ, ಸಾಸ್ತಾನ ಮತ್ತು ಬ್ರಹ್ಮಾವರ ಆಸುಪಾಸಿನಲ್ಲಿ ಮಂಗಳವಾರ ಮುಂಜಾನೆ ಮತ್ತು ಮಧ್ಯಾಹ್ನ ಸುರಿದ ಭಾರಿ ಗಾಳಿ ಮಳೆಗೆ ಜನಸಂಚಾರ ಅಸ್ತವ್ಯಸ್ತಗೊಂಡಿತು.

ಸಾಲಿಕೇರಿ, ಹೊನ್ನಾಳ ಸುತ್ತಮುತ್ತ ಮುಂಜಾನೆ ಬೀಸಿದ ಗಾಳಿಗೆ ಅನೇಕ ವಿದ್ಯುತ್ ಕಂಬಗಳು, ಬೃಹತ್ ಮರಗಳು ನೆಲಕ್ಕುರುಳಿವೆ. ಅನೇಕ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದ ಕಾರಣ ಕೆಲವು ರಸ್ತೆಗಳು ಬಂದ್ ಆಗಿದ್ದವು. ಮಧ್ಯಾಹ್ನ ಸುರಿದ ಭಾರಿ ಮಳೆಯಿಂದ ಚರಂಡಿ ತುಂಬಿ ನೀರು ರಸ್ತೆಯಲ್ಲಿಯೇ ಹರಿದು ಹೊಳೆಯಂತಾಗಿ ವಾಹನ ಸಂಚಾರಕ್ಕೂ ಅಡಚಣೆಯಾಯಿತು.

ಸಾಸ್ತಾನದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ನೀರು ನಿಂತು ಪಾದಾಚಾರಿಗಳು ನಡೆದಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸರದಲ್ಲಿ ಗುಡುಗು ಸಿಡಿಲಿನ ಅರ್ಭಟದಿಂದ ಜನರು ಕಂಗಾಲಾದರು. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ವಿದ್ಯುತ್ ವ್ಯತ್ಯಯದಿಂದ ಗ್ರಾಮಾಂತರ ಭಾಗಗಳ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಕೋಟ ಪಡುಕೆರೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.