ADVERTISEMENT

‘ಜಾತಿ ವ್ಯವಸ್ಥೆಗೂ ಅಸ್ಪೃಶ್ಯತೆಗೂ ಸಂಬಂಧವಿಲ್ಲ’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 5:59 IST
Last Updated 26 ನವೆಂಬರ್ 2017, 5:59 IST

ಉಡುಪಿ: ‘ಜಾತಿ ವ್ಯವಸ್ಥೆಗೂ ಹಿಂದೂ ಧರ್ಮದಲ್ಲಿ ಆಚರಣೆಯಲ್ಲಿರುವ ಅಸ್ಪೃಶ್ಯತೆಗೂ ಸಂಬಂಧವೇ ಇಲ್ಲ’ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿನ ರಾಯಲ್‌ ಗಾರ್ಡನ್‌ನಲ್ಲಿ ನಡೆಯುತ್ತಿರುವ ಧರ್ಮ ಸಂಸತ್‌ನಲ್ಲಿ ಬೆಳಗಿನ ಗೋಷ್ಠಿಗಳ ಬಳಿಕ ವಿಶ್ವ ಹಿಂದೂ ಪರಿಷತ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್‌ ಜೈನ್‌ ಮತ್ತು ಕರ್ನಾಟಕ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್‌ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಅಸ್ಪೃಶ್ಯತೆ ಹಿಂದೂ ಧರ್ಮದ ಹೊರಗಿನಿಂದ ಬಂದದ್ದು’ ಎಂದರು.

ದೇಶದಲ್ಲಿ ನೂರಾರು ಜಾತಿಗಳಿವೆ. ಬಂಟರು, ಬಿಲ್ಲವರು, ಗೌಡರು, ಲಿಂಗಾಯತರು, ರೆಡ್ಡಿ ಜಾತಿಯವರನ್ನು ಅಸ್ಪೃಶ್ಯರೆಂದು ಯಾರೂ ಗುರುತಿಸುವುದಿಲ್ಲ. ದಲಿತರು ಮಾತ್ರ ಅಸ್ಪೃಶ್ಯತೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಜಾತಿ ವ್ಯವಸ್ಥೆಗೂ ಅಸ್ಪೃಶ್ಯತೆಗೂ ಸಂಬಂಧವೇ ಇಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.

ADVERTISEMENT

‘1970ರಲ್ಲಿ ನಾನು ದಲಿತರ ಕೇರಿಗಳಲ್ಲಿ ಪಾದಯಾತ್ರೆ ಮಾಡಿದ್ದೆ. ಆಗ ಮಠಾಧೀಶರು, ಸಂತರು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದವರು ನಂತರ ಬೆಂಬಲಿಸಿದ್ದರು. 1947ರ ಕಾಲದಲ್ಲಿ ಇದ್ದಷ್ಟು ಅಸ್ಪೃಶ್ಯತೆ ಈಗ ಇಲ್ಲ. ಆದರೆ, ಈಗಲೂ ಇರುವ ಅಸ್ಪೃಶ್ಯತೆಯನ್ನು ಸಂಪೂರ್ಣ ನಿವಾರಣೆ ಮಾಡುವುದು ನನ್ನ ಗುರಿ’ ಎಂದರು.

ಪಂಕ್ತಿಭೇದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಭೇದವೂ ಉಂಟು, ಸಹಪಂಕ್ತಿ ಭೋಜನವೂ ಇದೆ. ಸಹಪಂಕ್ತಿ ಭೋಜನದ ಬಗ್ಗೆ ಯಾರೂ ಹೇಳುವುದಿಲ್ಲ. ಎಲ್ಲ ಮಠಗಳಲ್ಲಿ ಬ್ರಾಹ್ಮಣರಿಂದ ದಲಿತರವರೆಗೆ ಒಂದೇ ಪಂಕ್ತಿಯಲ್ಲಿ ಊಟ ಹಾಕಲಾಗುತ್ತಿದೆ. ಕೃಷ್ಣ ಮಠದಲ್ಲೂ ಸಹಪಂಕ್ತಿ ಭೋಜನ ನಡೆಯುತ್ತಿದೆ’ ಎಂದರು.

‘ಅನೇಕ ರಾಜಕೀಯ ವ್ಯಕ್ತಿಗಳು ಮತ್ತು ಬುದ್ಧಿಜೀವಿಗಳು ಬ್ರಾಹ್ಮಣರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್‌ ಅನ್ನು ಮನುವಾದಿಗಳು ಎಂದು ಟೀಕಿಸುತ್ತಾರೆ. ಆದರೆ, ನಾವು ಆರಂಭದಿಂದಲೂ ಮನುವಾದವನ್ನು ವಿರೋಧಿಸುತ್ತಿರುವವರು. ಮನುವಾದದ ಯಾವ ಲಕ್ಷ್ಮಣವೂ ಇಲ್ಲ. ಆದರೂ ನಾವು ದಲಿತ ವಿರೋಧಿಗಳು ಎಂದು ಬಿಂಬಿಸಲಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಣ, ಆಸ್ತಿ ಮೇಲೆ ಕಣ್ಣು: ಸುರೇಂದ್ರಕುಮಾರ್ ಜೈನ್ ಮಾತನಾಡಿ, ‘ಹಿಂದೂ ದೇವಾಲಯಗಳ ಆಡಳಿತ ನಿರ್ವಹಣೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವುದನ್ನು ವಿರೋಧಿಸಿ ಧರ್ಮ ಸಂಸತ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರಗಳು ದೇವಸ್ಥಾನಗಳ ಹಣ ಮತ್ತು ಆಸ್ತಿ ಮೇಲೆ ಕಣ್ಣಿಟ್ಟು ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿವೆ. ಇದು ನಿಲ್ಲದಿದ್ದರೆ ಬೃಹತ್‌ ಆಂದೋಲನ ನಡೆಸಲಾಗುವುದು’ ಎಂದರು.

ಅಸ್ಪೃಶ್ಯತೆ ನಿವಾರಣೆಗಾಗಿ ಎಲ್ಲ ಗ್ರಾಮಗಳಲ್ಲಿ ಹಿಂದೂ ಪರಿವಾರ್ ಮಿತ್ರ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಪರಿವಾರದ ಕಾರ್ಯಕರ್ತರು ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲಸ ಮಾಡುವ ದಲಿತರನ್ನು ಸ್ನೇಹಿತರನ್ನಾಗಿ ಸ್ವೀಕರಿಸಿ, ಅವರ ಏಳಿಗೆಗೆ ದುಡಿಯಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.