ADVERTISEMENT

ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 9:10 IST
Last Updated 7 ಅಕ್ಟೋಬರ್ 2012, 9:10 IST

ಉಡುಪಿ: ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹೆಬ್ರಿಯೊಂದನ್ನು ಬಿಟ್ಟರೆ ಉಳಿದೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾರ್ಕಳದಲ್ಲಿ ಮಿಶ್ರ ಪ್ರತಿಕ್ರಿಯೆ
ಕಾರ್ಕಳ: ಕಾವೇರಿಯಿಂದ  ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕನ್ನಡ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಕಾರ್ಕಳದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

 ತಾಲ್ಲೂಕಿನಾದ್ಯಂತ ಬಸ್‌ಗಳ ಓಡಾಟ ವಿರಳವಾಗಿತ್ತು. ಪಟ್ಟಣದ ಬಸ್ ನಿಲ್ದಾಣದಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. 5ನಿಮಿಷಗಳಿಗೊಮ್ಮೆ ಮಂಗಳೂರು -ಉಡುಪಿಯತ್ತ ತೆರಳುವ ಎಕ್ಸ್‌ಪ್ರೆಸ್ ಸಂಚಾರ 2 ಗಂಟೆಗೊಮ್ಮೆ  ನಡೆದಿತ್ತು. ಬೆಳ್ತಂಗಡಿ, ಬೆಳ್ಮಣ್ ಮೊದಲಾದೆಡೆ ತೆರಳುವ ಕೆಲವು ಬಸ್‌ಗಳು ಎಂದಿನಂತೆ ಓಡಾಟ ನಡೆಸಿದವು. ಹೀಗಾಗಿ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಬಸ್ ನಿಲ್ದಾಣ ವಠಾರದಲ್ಲಿ ಜನರ ಓಡಾಟ ಕಡಿಮೆಯಿತ್ತು. 

 ತಾಲ್ಲೂಕಿನ ವಿವಿಧೆಡೆ ಶಾಲಾ ಕಾಲೇಜುಗಳು ಎಂದಿನಂತೆ ತರಗತಿಗಳನ್ನು ನಡೆಸಿದವು. ಬಂದ್ ನಿಮಿತ್ತ ಕೆಲವೆಡೆ ಮಧ್ಯಾವಧಿ ಪರೀಕ್ಷೆ ಮುಂದುವರಿಸಿದ ಕಾರಣ ವಿದ್ಯಾರ್ಥಿಗಳು ಪರಿತಪಿಸಿದರು. ಬಸ್ ಓಡಾಟವಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು. ಸರ್ಕಾರಿ ಕಚೇರಿ, ಅಂಚೆ, ಬ್ಯಾಂಕ್, ಅಂಗಡಿ ಮುಂಗಟ್ಟುಗಳು ಎಂದಿನಂತೆ ವ್ಯವಹಾರ ನಡೆಸಿದವು. ಶನಿವಾರದ ಸಂತೆಗೆ ಗ್ರಾಮೀಣ ಪ್ರದೇಶದಿಂದ ಬರುವ ವ್ಯಾಪಾರಸ್ಥರು ಭಾಗವಹಿಸಲಿಲ್ಲ. ಸಂತೆಯಲ್ಲೂ ಜನಸಂಖ್ಯೆ ಕಡಿಮೆಯಿತ್ತು.

ಕುಂದಾಪುರದಲ್ಲಿ  ನೀರಸ
ಕುಂದಾಪುರ:ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ಶನಿವಾರ ನಡೆದ ರಾಜ್ಯ ಬಂದ್ ಕರೆಗೆ ಕುಂದಾಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕುಂದಾಪುರ ನಗರವೂ ಸೇರಿದಂತೆ ಕೋಟೇಶ್ವರ, ಸಿದ್ದಾಪುರ, ಹಾಲಾಡಿ, ತಲ್ಲೂರು, ಬಸ್ರೂರು, ಗಂಗೊಳ್ಳಿ, ನಾಡಾ ಮುಂತಾದ ಕಡೆಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದು ತಮ್ಮ ವ್ಯಾಪಾರ ವಹಿವಾಟನ್ನು ನಡೆಸಿದೆ. ಸರ್ಕಾರಿ ಹಾಗೂ ಇತರ ಕಚೇರಿಗಳಲ್ಲಿ ಜನರ ನೂಕು ನುಗ್ಗಲು ಇಲ್ಲದೆ ಇದ್ದರೂ ಕಚೇರಿ ಕಾರ್ಯಗಳಿಗಾಗಿ ಸಾಕಷ್ಟು ಜನರು ತಾಲ್ಲೂಕು ಕೇಂದ್ರಕ್ಕೆ ಬಂದಿದ್ದರು.

ಬಸ್ ಹಾಗೂ ಇತರ ವಾಹನಗಳು ಎಂದಿನಂತೆಯೆ ಸಂಚರಿಸುತ್ತಿದ್ದವು. ಶನಿವಾರ ಕುಂದಾಪುರ ನಗರದಲ್ಲಿ  ತಾಲ್ಲೂಕಿನ ಪ್ರಮುಖ  ವಾರದ `ಸಂತೆ~ ನಡೆಯುತ್ತಿದ್ದು `ಬಂದ್~ ಇರಬಹುದು ಎನ್ನುವ ಸಂದೇಹದಿಂದ ಗ್ರಾಮೀಣ ಭಾಗದಿಂದ ಸಂತೆಗೆ ಬಂದಿರುವವರ ಸಂಖ್ಯೆ ಸ್ವಲ್ಪ ಇಳಿಮುಖವಾಗಿತ್ತು ಎಂದು ಸಂತೆಯ ವ್ಯಾಪಾರಿಗಳು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಮನವಿ: ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ ಘಟಕದ ಸದಸ್ಯರು ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಆನ್ಯಾಯವನ್ನು ಸರಿಪಡಿಸಲು ಪ್ರಧಾನಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು

ಕರ್ನಾಟಕ ರಕ್ಷಣ ವೇದಿಕೆಯ ಯಾಕೂಬ್ ಖಾದರ್ ಗುಲ್ವಾಡಿ, ಶ್ರೀಧರ ಶೇರೆಗಾರ್, ದಿನೇಶ್ ಕುಂದಾಪುರ, ಪ್ರಮೋದ್, ವಿನಯ್, ಸಂದೀಪ್ ಪೂಜಾರಿ ಹಾಜರಿದ್ದರು.

ಬ್ರಹ್ಮಾವರದಲ್ಲಿ ಬಂದ್ ಇಲ್ಲ
ಬ್ರಹ್ಮಾವರ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಬ್ರಹ್ಮಾವರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೇವಲ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ತಮ್ಮ ಸ್ಟುಡಿಯೋಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದನ್ನು ಬಿಟ್ಟರೆ ಬೇರೆ ಯಾವ ಸಂಘಟನೆಗಳೂ ಬಂದ್‌ಗೆ ಬೆಂಬಲ ನೀಡಿಲ್ಲ. ನಗರದಲ್ಲಿ ಎಂದಿನಂತೆ ಜನಜೀವನ ಇತ್ತು. ಶಾಲಾ ಕಾಲೇಜುಗಳು, ಬ್ಯಾಂಕ್‌ಗಳು ಎಂದಿನಂತೆ ನಡೆಯಿತು.

ಬಸ್ ಸಂಚಾರಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ. ಈ ಭಾಗದ ರೈತ ಸಂಘಟನೆಗಳು ಕೂಡ ಬಂದ್‌ನಲ್ಲಿ ಭಾಗವಹಿಸದೇ ಇರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಸ್ತಾನ, ಸಾಲಿಗ್ರಾಮ, ಕೋಟ, ಬಾರ್ಕೂರಿ ನಲ್ಲಿಯೂ ಬಂದ್‌ಗೆ ಯಾವುದೇ ರೀತಿಯ ಬೆಂಬಲ ವ್ಯಕ್ತವಾಗಿರಲಿಲ್ಲ.

ಛಾಯಾಗ್ರಾಹಕರ ಪ್ರತಿಭಟನೆ
ಬ್ರಹ್ಮಾವರ: ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಛಾಯಾಗ್ರಾಹಕರ ಸಂಘದ ಬ್ರಹ್ಮಾವರ ವಲಯದ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿ ತಮ್ಮ ಸ್ಟುಡಿಯೋಗಳನ್ನು ಬಂದ್ ಮಾಡಿ ನಗರದಲ್ಲಿ ಬೈಕ್ ರ‌್ಯಾಲಿ ನಡೆಸಿದರು.

ರಾಜ್ಯದ ರಾಜಕೀಯ ನೇತಾರರು ಕೇವಲ ಕುರ್ಚಿಗಾಗಿ ಕಾದಾಟ ಗುದ್ದಾಟ ನಡೆಸಿ ಕಾಲ ಕಳೆಯುತ್ತಿದ್ದಾರೆ. ತಮಿಳು ನಾಡು ಕೇರಳದ ರಾಜಕೀಯ ನೇತಾರರಿ ಗಿರುವ ರಾಜಕೀಯ ಇಚ್ಛಾಶಕ್ತಿ ನಮ್ಮ ರಾಜ್ಯದ ಮುತ್ಸದ್ಧಿಗಳಿಗೆ ಇದ್ದಂತಿಲ್ಲ ಎಂದು ಆರೋಪಿಸಿದರು.

ಕಾವೇರಿ ನದಿ ನೀರು ಬಳಿಸಿ ಕೃಷಿ ಮಾಡಿ ಜೀವನ ನಡೆಸುತ್ತಿರುವ ಅದೆಷ್ಟೋ ರೈತರು ಮತ್ತು ಬೃಹತ್ ಬೆಂಗಳೂರು ಜನತೆ ಕುಡಿಯುವ ನೀರಿಗಾಗಿ ಕಾವೇರಿ ನದಿ ನೀರನ್ನು ನಂಬಿಕೊಂಡಿದ್ದಾರೆ. ಈಗಾಗಲೇ ಮುಂಗಾರು ಕ್ಷೀಣಗೊಂಡಿದೆ. ಬರಗಾಲ ಕಾಣಿಸಿಕೊಂಡಿದೆ. ವಿದ್ಯುತ್ ಕೊರತೆ ಉಂಟಾಗಿದೆ. ನಮ್ಮವರಿಗೇ ನೀರಿನ ಬವಣೆ ಕಾಣುತ್ತಿರುವಾಗ ತಮಿಳು ನಾಡಿಗೆ ನೀರು ಬಿಡುವುದು ಅವೈ ಜ್ಞಾನಿಕ. ಸರ್ಕಾರ ಇನ್ನಾದರೂ ಎಚ್ಚೆತ್ತು ಪರ್ಯಾಯ ವ್ಯವಸ್ಥೆ ಕೂಡಲೇ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ನಂತರ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಶಂಕರ್‌ರಾವ್ ಅವರಿಗೆ ಮನವಿ ನೀಡಿದರು. ಪ್ರತಿಭಟನೆಯಲ್ಲಿ  ಬ್ರಹ್ಮಾವರ ವಲಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸುದೇಶ್ ನಾಯಕ್, ಗೌರವಾಧ್ಯಕ್ಷ ಎ.ಸಿ.ಶೇಖರ್, ರವಿಕುಮಾರ್, ಸತೀಶ ಪೂಜಾರಿ ಕೊಂಡಾಡಿ, ರಾಜೇಶ್ ದೇವಾಡಿಗ, ರಾಜೇಶ್ ನಾಯ್ಕ, ಮೋಹನ್ ಉಡುಪ, ಪುಂಡಲೀಕ ನಾಯಕ್ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.