ADVERTISEMENT

ಠೇವಣಿ ಹಣದಲ್ಲಿ ಅಭಿವೃದ್ಧಿ:ಡಾ.ಎಂ.ಟಿ.ರೇಜು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:50 IST
Last Updated 8 ಅಕ್ಟೋಬರ್ 2012, 8:50 IST

ಪಡುಬಿದ್ರಿ: ಯುಪಿಸಿಎಲ್‌ನಿಂದ ಹಾನಿಗೊಳಗಾದ ಪಡುಬಿದ್ರಿ, ಕಾಪು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೇಜು, ಕಂಪೆನಿಯು ಜಿಲ್ಲಾಡಳಿತಕ್ಕೆ ರೂ.90ಲಕ್ಷ ಠೇವಣಿ ಇರಿಸಿದ್ದು, ಯೋಜನಾ ಪ್ರದೇಶ ಸುತ್ತಮುತ್ತಲ ಪ್ರದೇಶಗಳಲ್ಲಿ ಕಂಪೆನಿಯಿಂದ ಹಾನಿಗೊಳಗಾಗಿರುವ ಪ್ರದೇಶಕ್ಕೆ ಈ ಹಣವನ್ನು ವಿನಿಯೋಗಿಸಲಾಗುವುದು. ಎಲ್ಲೂರಿನ ದಳಂತ್ರ ಕೆರೆಯನ್ನು ಅಭಿವೃದ್ಧಿಪಡಿಸಿ ಅಲ್ಲೊಂದು ಕುಡಿಯುವ ನೀರಿನ ಸಮಸ್ಯೆಗೆ ಬಾವಿಯೊಂದನ್ನು ನಿರ್ಮಿಸಲಾಗುವುದು. ಗ್ರಾ.ಪಂ. ವ್ಯಾಪ್ತಿಯ ಸಮಸ್ಯೆಗೊಳಗಾದ ಪ್ರದೇಶಕ್ಕೆ ಇದನ್ನು ಬಳಸಲಾಗುವುದು ಎಂದರು.

ಆಸ್ಪತ್ರೆಗೆ ಭೇಟಿ: ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಭಿವೃದ್ಧಿ ಪಡಿಸಲು ಈ ಬಗ್ಗೆ ಜಿ.ಪಂ.ಎಂಜಿನಿಯರ್ ವಿಭಾಗದ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಅವರಲ್ಲಿ ಮೂರು ದಿನಗಳೊಳಗಾಗಿ ಪೂರ್ವಭಾವಿ ವರದಿ ನೀಡಲು ಸೂಚಿಸಿದರು.

ಉಚ್ಚಿಲಕ್ಕೆ ಭೇಟಿ: ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕರ ಗಮನ ಸೆಳೆಯುತ್ತಿರುವ ವಿವಾದಿತ ಉಚ್ಚಿಲ ರುದ್ರಭೂಮಿಗೆ ಸಂಬಂಧಿಸಿ ಕಟ್ಟಿಂಗೇರಿ ಪ್ರದೇಶಕ್ಕೆ ಭೇಟಿ ನೀಡಿದರು. ಈ ಭೇಟಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಯಾವುದೇ ಕಾರಣಕ್ಕೂ ನೀರಾವರಿ ಪ್ರದೇಶಕ್ಕೆ ಮೀಸಲಿಟ್ಟ ಜಾಗದಲ್ಲಿ ಸ್ಮಶಾನ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.

ಕಾಪು ಪ್ರದೇಶದ ಪಾದೂರು ಕಚ್ಚಾತೈಲ ಸಂಗ್ರಹಣಾ ಘಟಕದ ಪ್ರದೇಶಕ್ಕೂ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಸ್ಥಳೀಯರಿಂದ ಅಹವಾಲು ಸ್ವೀಕರಿಸಿದರು.

ತಹಶೀಲ್ದಾರ್ ಅಭಿಜಿನ್, ಜಿ.ಪಂ. ಸಹಾಯಕ ಎಂಜಿನಿಯರ್ ವಿಜಯಾನಂದ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT