ADVERTISEMENT

ತಿಂಗಳಾಂತ್ಯಕ್ಕೆ ಸರ್ವೇ ಸಂಪೂರ್ಣ: ಶಿಲ್ಪಾನಾಗ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 6:15 IST
Last Updated 23 ಡಿಸೆಂಬರ್ 2017, 6:15 IST

‘ಡಿಸೆಂಬರ್ ಅಂತ್ಯಕ್ಕೆ ಭಾಗಶಃ ಹಾಗೂ ಸಂಪೂರ್ಣ ಪರಿಭಾವಿತ ಅರಣ್ಯ ಸರ್ವೇ ಕಾರ್ಯ ಪೂರ್ಣಗೊಳ್ಳಲಿದೆ’ ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್ ತಿಳಿಸಿದರು. ಶುಕ್ರವಾರ ನಡೆದ ಉಡುಪಿ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಭಾಗಶಃ ಹಾಗೂ ಪರಿಭಾವಿತ ಅರಣ್ಯಗಳ ಬಗ್ಗೆ ಸರ್ವೇ ನಡೆಸುತ್ತಿವೆ. ಅರಣ್ಯ ಹಕ್ಕು ಕಾಯ್ದೆ ಅನ್ವಯ ಜನವರಿ 15ರ ಒಳಗೆ ಭಾಗಶಃ ಪರಿಭಾವಿತ ಅರಣ್ಯದವರಿಗೆ ಹಕ್ಕು ಪತ್ರವನ್ನು ನೀಡಲಾಗುತ್ತದೆ. ನಂತರ ದಿನದಲ್ಲಿ ಪರಿಭಾವಿತ ಅರಣ್ಯದವರಿಗೆ ಹಕ್ಕು ಪತ್ರ ನೀಡಲಾಗುತ್ತದೆ ಎಂದು ಹೇಳಿದರು.

‘ಗ್ರಾಮೀಣ ಪ್ರದೇಶದಲ್ಲಿ ನಿವೇಶನ ರಹಿತರಿಗೆ 94ಸಿ ಅಡಿಯಲ್ಲಿ 9 ಸೆಂಟ್ಸ್‌ವರೆಗೂ ಭೂಮಿ ನೀಡಲು ಅವಕಾಶವಿದೆ. ಆದರೆ, ಅದಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಣ್ಣು ನಕ್ಷೆ ರಚಿಸಿದ ನಂತರವಷ್ಟೇ ಅನಿರ್ವಾಯತೆ ಕಂಡು ಬಂದಲ್ಲಿ ಮಾತ್ರ ನೀಡಲಾಗುತ್ತದೆ. ಹಾಗಂತ ಎಲ್ಲರಿಗೂ 9 ಸೆಂಟ್ಸ್‌ ನೀಡಬೇಕು ಅಂತೇನೂ ಇಲ್ಲ. ನಗರ ಪ್ರದೇಶದಲ್ಲಿ 94ಸಿಸಿಯಲ್ಲಿ ಎರಡು ಮುಕ್ಕಾಲು ಸೆಂಟ್ಸ್‌ ವರೆಗೂ ನೀಡ ಬಹುದಾಗಿದೆ’ ಎಂದರು.

ಜನವರಿ 1ರಿಂದ ಹೆಬ್ರಿಯಲ್ಲಿ ವಿಶೇಷ ತಹಶೀಲ್ದಾರ್ ಕರ್ತವ್ಯ ನಿರ್ವಹಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದೀಗ ತಾಲ್ಲೂಕು ರಚನೆ ಮಾನದಂಡ ಆಧಾರದ ಮೇಲೆ ಹೆಬ್ರಿಯನ್ನು ಕೈ ಬಿಡುವ ಸಾಧ್ಯತೆಗಳು ಎದ್ದು ಕಾಣುತ್ತಿದೆ. ಇದರಿಂದಾಗಿ ಗ್ರಾಮಂತರ ಜನರು ಮತ್ತೆ ತಹಶೀಲ್ದಾರ್ ಅವರನ್ನು ಸಂಪರ್ಕಿಸಲು 46 ಕಿ.ಮೀ. ಸಂಚರಿಸಬೇಕಾಗುತ್ತದೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ತಿಳಿಸುವಂತೆ ಸಹಾಯಕ ಕಮಿಷನರ್ ಶಿಲ್ಪಾನಾಗ್ ಅವರಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ್ ಮನವಿ ಮಾಡಿದರು.

ADVERTISEMENT

ಇದಕ್ಕೆ ಪ್ರತಿಕ್ರಯಿಸಿದ ಶಿಲ್ಪಾನಾಗ್, ‘ತಾಲ್ಲೂಕು ರಚನೆಗೆ ಒಂದು ಲಕ್ಷ ಜನಸಂಖ್ಯೆ ಹಾಗೂ 58 ಹಳ್ಳಿಗಳನ್ನು ಹೊಂದಿರದ ಕಾರಣ ಹೆಬ್ರಿ ತಾಲ್ಲೂಕು ರಚನೆ ತಿರಸ್ಕರಿಸಲಾಗಿತ್ತು. ಭೌಗೋಳಿಕ ವಿಸ್ತಿರ್ಣದಲ್ಲಿ ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿ ತಾಲ್ಲೂಕು ರಚನೆ ಮಾಡುವಂತೆ ಮತ್ತೆ ಮನವಿ ಸಲ್ಲಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು ಮಾತನಾಡಿ ‘ ಜಿಲ್ಲೆಯಲ್ಲಿ ಈಗಾಗಲೇ ದೀನ್ ದಯಾಳ್ ವಿದ್ಯುದೀಕರಣ ಯೋಜನೆ ಅಡಿಯಲ್ಲಿ ವಿದ್ಯುತ್ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಆದರೆ ಫಲಾನುಭವಿಗಳಿಗೆ ಪಡಿತರ ಚೀಟಿ ದೊರೆಯದ ಕಾರಣ ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕೆಲಸ ಮಾಡುವವರ ಹೆಬ್ಬೆರಳು ಗುರುತು ಹೊಂದಾಣಿಕೆಯಾಗದ ಕಾರಣ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಸಾಮಾಗ್ರಿ ಸಿಕ್ಕಿಲ್ಲ. ಆದರಿಂದ ಮೊದಲಿನಂತೆ ಆಹಾರ ಸಾಮಾಗ್ರಿಯನ್ನು ವಿತರಿಸಬೇಕು’ ಎಂದು ಮಾನವಿ ಮಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ಪಡಿತರ ಚೀಟಿಗೆ 15,925 ಅರ್ಜಿಗಳು ಬಂದಿವೆ. ಅದರಲ್ಲಿ 8,112 ತನಿಖೆ ಕಾರ್ಯ ಸಂಪೂರ್ಣಗೊಂಡು ಮುದ್ರಣಗೊಂಡು ಅಂಚೆಯ ಮೂಲಕ ಫಲಾನುಭವಿಗಳ ವಿಳಾಸಕ್ಕೆ ಕಳುಹಿಸಲಾಗಿದೆ. ಬಾಕಿ ಇರುವ 7,813 ಮೂರನೇ ಹಂತದಲ್ಲಿ ಪರಿಶೀಲನೆಯಾಗಲಿದೆ. ಇನ್ನೂ ಪಡಿತರ ಸಾಮಗ್ರಿ ಸಿಗದವರು ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಆಹಾರ ಮತ್ತು ನಾಗಾರಿಕ ಇಲಾಖೆ ಅಧಿಕಾರಿ ತಿಳಿಸಿದರು.

ವಸತಿ ಯೋಜನೆಯಡಿ ಸರ್ಕಾರದಿಂದ ಸವಲತ್ತು ಪಡೆದು ನಿರ್ಮಾಣವಾದ ಮನೆ ಕನಿಷ್ಠ 20 ವರ್ಷಗಳಾಗಿದ್ದು, ಮನೆ ಶಿಥಿಲ ಹಾಗೂ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂಪೂರ್ಣವಾಗಿ ಬಿದ್ದೂ ಹೋದಲ್ಲಿ ಇದರ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಧೃಡೀಕರಣ ಪತ್ರ ನೀಡಿದರೆ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಾಗಿ ಪರಿಗಣಿಸಲಾಗುತ್ತದೆ ಎಂದು ಸಿಇಒ ಶಿವಾನಂದ ಕಾಪಶಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ್ ಬಾಬು, ಉಪಾಧ್ಯಕ್ಷೆ ಕೆ.ಶೀಲಾ ಶೆಟ್ಟಿ ಉಪಸ್ಥಿತರಿದ್ದರು.

ವಯೋಮಿತಿ ಏರಿಕೆ

ದೇವರಾಜ್ ಅರಸು ವಸತಿ ಯೋಜನೆಯಡಿ ವಿಧವಾ ಫಲಾನುಭವಿಗಳ ವಯೋಮಿತಿಯನ್ನು 50ರಿಂದ 60 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಉಡುಪಿ, ಕಾರ್ಕಳ, ಕಾಪು, ಕಾಪುವಿನಲ್ಲಿ ಅರ್ಜಿಯನ್ನು ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿದೆ. ಬ್ಯಾಂಕ್ ಖಾತೆ ಸಂಖ್ಯೆಯಲ್ಲಿನ ವ್ಯತ್ಯಾಸ ಹಾಗೂ ಆಧಾರ್‌ ಜೋಡಣೆಯಾಗದ ಕಾರಣ ಕೆಲವು ಫಲಾನುಭವಿಗಳಿಗೆ ಸರ್ಕಾರದಿಂದ ಬಿಲ್ ಪಾವತಿಯಾಗಿಲ್ಲ. ಆದರೆ ಇದೀಗ ಇಂತಹ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.