ADVERTISEMENT

ನಾಗಾರಾಧನೆ-ಎಲ್ಲ ದೇವರ ಆರಾಧನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 7:30 IST
Last Updated 10 ಫೆಬ್ರುವರಿ 2012, 7:30 IST

ಉಡುಪಿ: `ನಾಗ ಅನೇಕ ದೇವರನ್ನು ಒಳಗೊಂಡಿದ್ದು ನಾಗಾರಾಧನೆಯಿಂದ ಎಲ್ಲ ದೇವರ ಆರಾಧನೆ ಮಾಡಿದಂತಹ ಧನ್ಯತೆ ಪ್ರಾಪ್ತಿಯಾಗುತ್ತದೆ~ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಇಲ್ಲಿ ಹೇಳಿದರು.

ಉಡುಪಿ ಕಿದಿಯೂರು ಹೋಟೆಲ್ ರಜತ ಸಂಭ್ರಮದ ಅಂಗವಾಗಿ ಹಮ್ಮಿಕೊಂಡ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉತ್ಸವ ಸಂಪನ್ನಗೊಂಡಿದ್ದು ಬುಧವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಶೀರೂರು ಲಕ್ಷ್ಮೀವರ ತೀರ್ಥರು, ಕಾಣಿಯೂರು ವಿದ್ಯಾವಲ್ಲಭ ತೀರ್ಥರು, ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರು ಆಶೀರ್ವಚನ ನೀಡಿದರು.

ಶಾಸಕ ರಘುಪತಿ ಭಟ್, ಕಿದಿಯೂರು ಹೋಟೆಲ್‌ನ ಮಾಲೀಕ ಭುವನೇಂದ್ರ ಕಿದಿಯೂರು, ಹೀರಾ ಬಿ.ಕಿದಿಯೂರು ಉಪಸ್ಥಿತರಿದ್ದರು.

ಅಷ್ಟಪವಿತ್ರ ನಾಗಮಂಡಲೋತ್ಸವ: ಮೂರು ದಿನಗಳ ರಜತ ಸಂಭ್ರಮದ ಕೊನೆಯ ದಿನವಾದ ಬುಧವಾರ ರಾತ್ರಿ ಹಾಲಿಟ್ಟು ಸೇವೆಯೊಂದಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ ಜರುಗಿತು. ಸಾವಿರಾರು ತೆಂಗು, ಕಂಗು, ಬಾಳೆಗೊನೆ, ಹೂವುಗಳಿಂದಗಳ ವಿಶಿಷ್ಟ ಅಲಂಕಾರ ಮಾಡಲಾಗಿತ್ತು. ವೈದ್ಯರಾಗಿ ಕೃಷ್ಣಪ್ರಸಾದ್, ನಾಗಕನ್ನಿಕೆಯರಾಗಿ ನಟರಾಜ್ ವೈದ್ಯ ಮತ್ತು ಬಾಲಕೃಷ್ಣ ವೈದ್ಯ ಹಾಗೂ ನಾಗಪಾತ್ರಿಗಳಾಗಿ ಅಲೆವೂರು ಮುರುಳೀಧರ ಭಟ್, ರಮಾನಂದ ಭಟ್ ಬೆಳ್ಳರಪಾಡಿ ಅವರ ವಿಶಿಷ್ಟ ನರ್ತನ ನೋಡುಗರ ಗಮನ ಸೆಳೆಯಿತು. ಸಾವಿರಾರು ಜನ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.