ಉಡುಪಿ: ತಾಲ್ಲೂಕಿನ ಚೇರ್ಕಾಡಿ ಹಾಗೂ ಕರ್ಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಕಟ್ಟಡ ತೆರವು ಆಗದೇ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ತಾಲ್ಲೂಕು ಪಂಚಾಯಿತಿಯಲ್ಲಿ ತೆಗೆದುಕೊಂಡ ಯಾವ ನಿರ್ಣಯಗಳಿಗೂ ಬೆಲೆ ಬರುತ್ತಿಲ್ಲ, ಹೀಗಾಗಿ ಇಂತಹ ಸಮಸ್ಯೆ ಇತ್ಯರ್ಥವಾಗದೇ ಇದ್ದಲ್ಲಿ ಮುಂದಿನ ಸಾಮಾನ್ಯ ಸಭೆಗಳಿಗೆ ಹಾಜರಾಗುವುದಿಲ್ಲ ಎಂದು ವಿರೋಧಪಕ್ಷ ಸದಸ್ಯರು ಎಚ್ಚರಿಸಿದ ಘಟನೆ ಇಲ್ಲಿ ನಡೆಯಿತು.
ಸೋಮವಾರ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಉಮೇಶ್ ನಾಯಕ್ ಈ ವಿಷಯ ಪ್ರಸ್ತಾಪಿಸಿದರು.
ಕಳೆದ ಬಾರಿಯೂ ಇದೇ ವಿಷಯ ಪ್ರಸ್ತಾಪಿಸಿ ತಾ.ಪಂ.ನಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈ ವಿಚಾರ ಇದುವರೆಗೂ ಇತ್ಯರ್ಥಗೊಂಡಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ಸಾಮಾನ್ಯ ಸಭೆಗಳಿಗೆ ನಾವು ಬರುವುದೇ ಇಲ್ಲ ಎಂದು ಅವರು ಎಚ್ಚರಿಸಿದರು.
ಇದಕ್ಕೆ ಉತ್ತರಿಸಿದ ಬ್ರಹ್ಮಾವರ ವಿಶೇಷ ತಹಶೀಲ್ದಾರ್, ಚೇರ್ಕಾಡಿ ಗ್ರಾ.ಪಂ.ವ್ಯಾಪ್ತಿಯ ಅಕ್ರಮ ಕಟ್ಟಡಗಳು ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಆ ಇಲಾಖೆಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಕ್ರಮ ಕೈಗೊಂಡ ಕೂಡಲೇ ತಿಳಿಸಲಾಗುವುದು ಎಂದರು.
ಹಾರಾಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಕಾರ್ಯವೈಖರಿಗೆ ಸದಸ್ಯ ಕೇಶವ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಅಗತ್ಯ ಇದ್ದರೂ ಪಿಡಿಒ ಆ ಬಗ್ಗೆ ಗಮನ ಹರಿಸುತ್ತಿಲ್ಲ.
ಪಂಚಾಯಿತಿಗೆ ಬೆಳಿಗ್ಗೆ 11ಕ್ಕೆ ಬಂದರೆ ಸಂಜೆ 4ಕ್ಕೆಲ್ಲ ನಿರ್ಗಮಿಸುತ್ತಾರೆ. ಇಂತಹ ಅಧಿಕಾರಿಗಳು ನಮ್ಮ ಊರಿಗೆ ಬೇಡ. ನಮ್ಮಲ್ಲಿ ಸಾಮಾಜಿಕ ನ್ಯಾಯವಿದ್ದರೆ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಕಾರ್ಯನಿರ್ವಹಣಾಧಿಕಾರಿ ಮಂಜುನಾಥಯ್ಯ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸರಿಯಾಗದ ಮೈಕ್ ವ್ಯವಸ್ಥೆ- ಅಸಮಾಧಾನ: ತಾ.ಪಂ.ನಲ್ಲಿ ಕಳೆದ ಒಂದೂವರೆ ವರ್ಷದಿಂದ ಮೈಕ್ ವ್ಯವಸ್ಥೆ ಕೆಟ್ಟಿದ್ದು ಅದನ್ನು ಸರಿಪಡಿಸುವ ಕಾರ್ಯವೇ ನಡೆಯುತ್ತಿಲ್ಲ ಎಂದು ಕೆಲ ಸದಸ್ಯರು ದೂರಿದರು. ಅದಕ್ಕೆ ಉತ್ತರಿಸಿದ ಕಾರ್ಯನಿರ್ವಹಣಾಧಿಕಾರಿ, ಹೊಸ ಮೈಕ್‌ಗಳನ್ನು ಅಳವಡಿಸಲಾಗಿ ಅದರಲ್ಲಿ ಸಣ್ಣಪುಟ್ಟ ಲೋಪಗಳಿವೆ, ಅದನ್ನು ಶೀಘ್ರವೇ ದುರಸ್ತಿ ಮಾಡುತ್ತೇವೆ, ದೋಷ ಸರಿಯಾಗದೇ ಇದ್ದಲ್ಲಿ ಸಂಬಂಧಪಟ್ಟ ಕಂಪೆನಿಗೆ ಹಣ ಪಾವತಿಸುವುದಿಲ್ಲ ಎಂದು ಭರವಸೆ ನೀಡಿದರು.
ಮಂಜೂರಾಗದ ಪಿಂಚಣಿ ಯೋಜನೆ: ವಿವಿಧ ಪಿಂಚಣಿ ಯೋಜನೆ ಮಂಜೂರು ಯಾವಾಗ ಆಗುತ್ತದೆ? ಜಿಲ್ಲೆಗೆ ಕೇವಲ 100 ಫಲಾನುಭವಿಗಳ ಆಯ್ಕೆ ಗುರಿ ನಿಗದಿ ಮಾಡಿದ್ದು ಸರಿಯಲ್ಲ ಎಂದು ವಿರೋಧಪಕ್ಷ ಸದಸ್ಯೆ ವೆರೋನಿಕಾ ಕರ್ನೆಲಿಯೋ ಆಕ್ಷೇಪಿಸಿದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅಭಿಜಿನ್, ಬಾಕಿ ಇರುವ ಅರ್ಜಿಗಳ ಶೀಘ್ರ ವಿಲೇವಾರಿ ಮಾಡಲಾಗುವುದು, ಗುರಿ ನಿಗದಿಯ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಅಲೆವೂರು ಗ್ರಾ.ಪಂ.ವ್ಯಾಪ್ತಿಯಲ್ಲಿ 250 ಪಡಿತರ ಚೀಟಿ ಆರ್ ಆರ್ ನಂಬರ್ ನೀಡದೇ ರದ್ದಾಗಿರುವ ಬಗ್ಗೆ ಗ್ರಾ.ಪಂ.ಅಧ್ಯಕ್ಷ ಹರೀಶ್ ಕಿಣಿ ಗಮನಕ್ಕೆ ತಂದರು. ಅಲ್ಲದೇ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು. ಅಲೆವೂರು ನೆಹರೂ ನಗರದಲ್ಲಿ 25 ವರ್ಷದಿಂದ ವಾಸ ಮಾಡುತ್ತಿರುವ 150 ಕುಟುಂಬಗಳ ಹಕ್ಕುಪತ್ರ ರದ್ದಾಗಿದೆ ಎನ್ನುವ ವಿಚಾರ ತಾಲ್ಲೂಕು ಕಚೇರಿಯಲ್ಲಿ ನಮೂದಾಗಿದೆ.
ಇದಕ್ಕೆ ಉತ್ತರಿಸಿದ ಉಡುಪಿ ತಹಶೀಲ್ದಾರ್, ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಅಲೆವೂರು ಪ್ರಗತಿ ನಗರದಲ್ಲಿ ಅರಣ್ಯಭೂಮಿಯಲ್ಲಿ ವಾಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಮನೆ ನಂಬರ್ ನೀಡುವ ವಿಚಾರವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಗೋಮಾಳವನ್ನು ಡಂಪಿಂಗ್‌ಯಾರ್ಡ್‌ಗೆ ನೀಡಿರುವ ಬಗ್ಗೆ ಹರೀಶ್ ಕಿಣಿ ಪ್ರಶ್ನೆಗೆ ಉತ್ತರಿಸಿದ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಗೋಮಾಳವನ್ನು ಡಂಪಿಂಗ್ ಯಾರ್ಡ್ ಮಾಡಲು ಅವಕಾಶ ನೀಡುವುದಿಲ್ಲ ಎಂದರು.
ತಾ.ಪಂ. ಅಧ್ಯಕ್ಷ ದೇವದಾಸ್ ಹೆಬ್ಬಾರ್, ಬೇಬಿ ಎಸ್. ಪೂಜಾರಿ, ಭರತ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.