ADVERTISEMENT

ನೈರ್ಮಲ್ಯದಿಂದ ಆರೋಗ್ಯಕರ ಸಮಾಜ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 10:15 IST
Last Updated 18 ಫೆಬ್ರುವರಿ 2011, 10:15 IST

ಉಡುಪಿ: ನೈರ್ಮಲ್ಯ ಪೂರ್ಣ ಜನಜೀವನ ಪದ್ಧತಿಯಿಂದ ಸ್ವಾಸ್ಥ್ಯ ಪೂರ್ಣ ಸಮಾಜ ನಿರ್ಮಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅವರ ಪರಿಸರ ಸ್ವಚ್ಛವಾಗಿರಿಸಿಕೊಳ್ಳುವುದನ್ನು ಕಲಿಯಬೇಕು ಎಂದು ಉಡುಪಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಿ. ಮಂಜುನಾಥಯ್ಯ ಇಲ್ಲಿ ತಿಳಿಸಿದರು.ಉಡುಪಿ ಸೇಂಟ್ ಸಿಸಿಲೀಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ವಾರ್ತಾ ಇಲಾಖೆ, ಸಿಸಿಲೀಸ್ ಹೆಣ್ಣುಮಕ್ಕಳ ಪ್ರೌಢಶಾಲೆ, ಅಂಬಲಪಾಡಿ ರೋಟರಿ ಕ್ಲಬ್ ಆಶ್ರಯದಲ್ಲಿ ಗುರುವಾರ ಜರುಗಿದ ಪರಿಸರ ನೈರ್ಮಲ್ಯ ಮತ್ತು ಸ್ವಚ್ಛತೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಮುಖ್ಯವಾಗಿ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಹಾಕುವುದರಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ನಗರ ಹಾಗೂ ಗ್ರಾಮದ ಸೌಂದರ್ಯ ಹಾಳಾಗುತ್ತದೆ, ಜನಜೀವನದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ರೋಗಗಳಿಗೆ ಕಾರಣವಾಗುತ್ತದೆ. ಹೀಗಾಗಿ ಆರೋಗ್ಯಪೂರ್ಣ ಸಮಾಜಕ್ಕೆ ಸ್ವಚ್ಛತೆ ಕಾಯ್ದುಕೊಂಡು ಹೋಗುವುದು ಬಹಳ ಮುಖ್ಯ ಎಂದರು.

ನಗರಸಭೆಯ ಪರಿಸರ ಎಂಜಿನಿಯರ್ ಸುಬ್ರಹ್ಮಣ್ಯ ಎಂ.ಕೆ, ಕುಂದಾಪುರ ಪುರಸಭೆಯ ಪರಿಸರ ಎಂಜಿನಿಯರ್ ರಾಘವೇಂದ್ರ ಪರಿಸರ ನೈರ್ಮಲ್ಯ ಮತ್ತು ಸ್ವಚ್ಛತೆ ಕುರಿತು ಉಪನ್ಯಾಸ ನೀಡಿದರು. ಬಯಲು ಶೌಚಾಲಯಗಳೇ ಎಲ್ಲಾ ರೋಗಗಳಿಗೆ ಪ್ರಮುಖ ಕಾರಣ. ಪರಿಸರವನ್ನು ಸ್ವಚ್ಛವಾಗಿ ಉಳಿಸಿದರೆ ನೈರ್ಮಲ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದರು.ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೋಜಿ ಮೆಂಡೋನ್ಸ ಅಧ್ಯಕ್ಷತೆ ವಹಿಸಿದ್ದರು. ಅಂಬಲಪಾಡಿ ರೋಟರಿ ಕ್ಲಬ್ ಅಧ್ಯಕ್ಷ ಕೆ. ಶ್ರೀಶ ಆಚಾರ್ಯ, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಶಾಲೆಯ ಕನ್ನಡ ಅಧ್ಯಾಪಕ ದೇವೇಂದ್ರ ನಾಯ್ಕ, ಸಿಸಿಲಿಯಾ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.