ADVERTISEMENT

ಪಂಚಾಯಿತಿ ನಿರ್ಲಕ್ಷ್ಯ: ಹಿಂಜಾವೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 10:14 IST
Last Updated 2 ಏಪ್ರಿಲ್ 2013, 10:14 IST

ಗಂಗೊಳ್ಳಿ (ಬೈಂದೂರು) : ಗಂಗೊಳ್ಳಿಯಲ್ಲಿ ನಡೆಯುತ್ತಿರುವ ಮಸೀದಿ ನಿರ್ಮಾಣ ಹಾಗೂ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಖಂಡಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ಸ್ಥಳೀಯ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಅದಕ್ಕೆ ಅನುಮತಿ ನೀಡಿಲ್ಲ. ಆದರೆ ಸಂಬಂಧಿಸಿದ ಸಂಸ್ಥೆ ಕಾಮಗಾರಿ ಮುಂದುವರಿಸಿದೆ. ಇದರ ಹಾಗೂ ಅನಧಿಕೃತ ಕಟ್ಟಡ ಕಾಮಗಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಹಿಂಜಾವೇ ಬೈಂದೂರು ತಾಲ್ಲೂಕು ಸಂಚಾಲಕ ವಾಸು ದೇವಾಡಿಗ, ಉತ್ತರ ಪ್ರಾಂತ ಕಾನೂನು ಸಲಹೆಗಾರ ರಾಜೇಶ ನಾಯ್ಕ ಗಂಗೊಳ್ಳಿ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಈಗಾಗಲೆ 9 ಮಸೀದಿಗಳಿವೆ. ಈಗ ಮಿಸ್ಬಾ ಉಲ್ ಉಲೂಮ್ ಸಂಸ್ಥೆ ಇನ್ನೊಂದನ್ನು ನಿರ್ಮಿಸುತ್ತಿದೆ. ಇದಕ್ಕೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿಲ್ಲ.

ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆ ಇದರ ವಿರುದ್ಧ ನಿರ್ಣಯ ಸ್ವೀಕರಿಸಿದೆ. ಅದರೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದರು. ಸ್ಥಳೀಯ ಘಟಕದ ಅಧ್ಯಕ್ಷ ರಘುನಾಥ ಖಾರ್ವಿ, ರವೀಂದ್ರ ಪಟೇಲ್,  ಉಮಾನಾಥ ದೇವಾಡಿಗ, ರಾಘವೇಂದ್ರ ಗಾಣಿಗ, ರತ್ನಾಕರ ಗಾಣಿಗ, ಶಿವಾನಂದ ಗಾಣಿಗ, ಬಿ. ಗಣೇಶ ಶೆಣೈ, ರಾಮ ಖಾರ್ವಿ ಗುಡ್ಡೆಕೇರಿ, ಗಂಗಾಧರ ಎಸ್. ಆರ್. ಜಿ  ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಮನವಿ ಸ್ವೀಕರಿಸಿದ ಗ್ರಾ.ಪಂ. ಅಧ್ಯಕ್ಷೆ ಸಾಕಮ್ಮ ನಿರ್ಮಾಣ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಅನುಮತಿ ನೀಡಿಲ್ಲ. ಅನಧಿಕೃತ ನಿರ್ಮಾಣದ ವಿರುದ್ಧ ಸಂಸ್ಥೆಗೆ ನೋಟೀಸ್ ನೀಡಲಾಗಿದೆ.  ಇನ್ನೊಮ್ಮೆ ನೋಟೀಸ್ ನೀಡಿ, ಅದಕ್ಕೆ ಸ್ಪಂದಿಸದಿದ್ದರೆ ಜಿಲ್ಲಾಡಳಿತಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾ ಗುವುದು ಎಂದು ಹೇಳಿದರು.

ಉಪಾಧ್ಯಕ್ಷೆ ಶಾರದಾ ಶೇರೆಗಾರ್, ಸದಸ್ಯರಾದ ಬಿ. ಲಕ್ಷ್ಮೀಕಾಂತ ಮಡಿವಾಳ್, ಬಿ.ರಾಘವೇಂದ್ರ ಪೈ, ಮಹೇಶ ಪೂಜಾರಿ, ರಾಜ ಖಾರ್ವಿ, ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ, ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ ಕವರಿ, ಗಂಗೊಳ್ಳಿ ಠಾಣಾಧಿಕಾರಿ ಸಂಪತ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT