ADVERTISEMENT

ಪಠ್ಯೇತರ ಚಟುವಟಿಕೆಯಿಂದ ಆತ್ಮಸ್ಥೈರ್ಯ ವೃದ್ಧಿ

ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ: ಸಚಿವ ಪ್ರಮೋದ್‌

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 9:16 IST
Last Updated 17 ಮಾರ್ಚ್ 2018, 9:16 IST
ಮಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಪ್ರಜಾವಾಣಿ ಚಿತ್ರ
ಮಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಉಡುಪಿ: ಪುಸ್ತಕದ ಪಾಠ ಪರೀಕ್ಷೆಗೆ ಸೀಮಿತವಾಗಿರುತ್ತದೆ. ಪಠ್ಯೇತರ ಚಟುವಟಿಕೆಗಳು ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಿ ಸಮಸ್ಯೆ ಬಗೆಹರಿಸಿಕೊಳ್ಳುವ ವಿಶ್ವಾಸ ನೀಡುತ್ತವೆ ಎಂದು  ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿರುವ ಅಂತರ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅದಮಾರು ಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಶ್ವಪ್ರಿಯ ಸ್ವಾಮೀಜಿ, ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಹಾಗೂ ಸಾಮರ್ಥ್ಯ ಇರುತ್ತದೆ. ಅದನ್ನು ಹೊರಗೆ ತರುವ ವೇದಿಕೆಯನ್ನು ನಾವು ಕಲ್ಪಿಸಿಕೊಡಬೇಕು. ಇದರಿಂದ ಉತ್ತಮ ಪ್ರತಿಭೆಗಳು ಸಮಾಜಕ್ಕೆ ಸಿಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನವಾನೆ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ ಪರ್ಕಳ, ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿ, ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಭಾಗ್ಯ ಪಡಿಯಾರ್, ಕಾರ್ಯದರ್ಶಿ ಆದಿತ್ಯ ಪೈ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಮಕೃಷ್ಣ ಉಡುಪ ಸ್ವಾಗತಿಸಿದರು. ವಿದ್ಯಾರ್ಥಿ ಸಂಪತ್ ಕುಮಾರ್ ವಂದಿಸಿದರು. ತೇಜೇಶ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.