ADVERTISEMENT

ಪಡುವರಿ:ದಿಕ್ಕು ಬದಲಿಸಿದ ತ್ಯಾಜ್ಯ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 7:40 IST
Last Updated 21 ಏಪ್ರಿಲ್ 2012, 7:40 IST

ಬೈಂದೂರು: ಪಡುವರಿ ಗ್ರಾಮದ ಹೇನಬೇರಿನಲ್ಲಿ ಜಾನುವಾರು ಸರಣಿ ಸಾವಿಗೆ ತ್ಯಾಜ್ಯ ಕಾರಣ ಎಂಬ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧ ವಿಧಿಸಿದ್ದರೂ ಮತ್ತೊಂದು ದಿಕ್ಕಿನಲ್ಲಿ ತ್ಯಾಜ್ಯ ಎಸೆದಿರುವುದು ಶುಕ್ರವಾರ ಕಂಡುಬಂದಿದೆ. 

 ಸ್ಥಳೀಯರ ಕರೆ ಅನುಸರಿಸಿ ಸ್ಥಳಕ್ಕೆ ಧಾವಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಹೇನಬೇರಿನ ಗೋಪಾಲ ದೇವಾಡಿಗ, ಮಂಜುನಾಥ ದೇವಾಡಿಗ, ಶಶಿಧರ ದೇವಾಡಿಗ, ಮಹಾಬಲ ದೇವಾಡಿಗ ಅವರು ಅಲ್ಲಿ ಎಸೆದಿದ್ದ ಸೆಯಲಾಗಿದ್ದ ಆರು ಮೂಟೆ ಕೋಳಿ ತ್ಯಾಜ್ಯ ಮತ್ತು ಆರು ಹಂದಿಗಳ ಶವವನ್ನು ತೋರಿಸಿದರು.
 
ಕೋಳಿ ತ್ಯಾಜ್ಯವನ್ನು ಹೆದ್ದಾರಿಯ ಪೂರ್ವ ದಿಕ್ಕಿನಲ್ಲಿ ಎಸೆದಿದ್ದರೆ, ಹಂದಿಯ ಶವಗಳನ್ನು ಹೆದ್ದಾರಿ ಅಂಚಿನ ಸುರ್ಗಿಹಳ್ಳಕ್ಕೆ ಎಸೆಯಲಾಗಿತ್ತು. ಕೋಳಿ ತ್ಯಾಜ್ಯದಲ್ಲಿ ಹುಳಗಳು ಹರಿದಾಡುತ್ತಿದ್ದು, ದುರ್ನಾತ ಬೀರುತ್ತಿತ್ತು. ಹಂದಿ ಶವಗಳು ವಾಹನದಲ್ಲಿ ಸಾಗಿಸುವಾಗ, ಅಥವಾ ಆ ಬಳಿಕ ಕಾರದಿಂದ ಸಾವನ್ನಪ್ಪಿರಬಹುದು ಎಂಬುದು ಇವರ ಯುವಕರ ಅಭಿಪ್ರಾಯ.

ಇದೇ 11ರಂದು ಒತ್ತಿನೆಣೆಯ ಹೆದ್ದಾರಿಯ ಪೂರ್ವ ಬದಿಯ ರಕ್ಷಿತಾರಣ್ಯ ಪ್ರದೇಶದಲ್ಲಿ ಪ್ರಾಣಿ ತ್ಯಾಜ್ಯಗಳ ಜತೆ ಹಳೆಯ ಔಷಧಿ ಮತ್ತು ಆಸ್ಪತ್ರೆ ತ್ಯಾಜ್ಯದ ರಾಶಿ ಕಂಡುಬಂದಿದ್ದವು. 16ರಂದು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಈ ಪ್ರದೇಶಕ್ಕೆ ವಾಹನಗಳು ಪ್ರವೇಶಿಸದಂತೆ ಟ್ರೆಂಚ್ ತೆಗೆದಿದ್ದು, ಮಣ್ಣಿನ ದಂಡೆ ಹಾಕುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಅರಣ್ಯ ಇಲಾಖೆ ಕೆಲಸ ನಿರ್ವಹಿಸಿತ್ತು. ಆದರೆ ಈಗ ಪಶ್ಚಿಮ ದಿಕ್ಕಿನಲ್ಲಿ ತ್ಯಾಜ್ಯ ಎಸೆದಿದ್ದಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಪ್ರತಿಭಟನೆ ಎಚ್ಚರಿಕೆ
ಜಾನುವಾರು ಸಾವಿನಿಂದ ಸಂಕಷ್ಟದಲ್ಲಿರುವ ಇಲ್ಲಿನ ನಿವಾಸಿಗಳು ಪ್ರಸಕ್ತ ಬೆಳವಣಿಗೆಯಿಂದ ಇನ್ನಷ್ಟು ಆಕ್ರೋಶಗೊಂಡಿದ್ದಾರೆ. ಒಂದೆಡೆ ತಮಗಾಗಿರುವ ನಷ್ಟಗಳಿಗೆ ಜನಪ್ರತಿನಿಧಿಗಳ, ಅಧಿಕಾರಿಗಳ ಸಾಂತ್ವನ ಬಿಟ್ಟರೆ ಬೇರೆ ಯಾವ ಪರಿಹಾರವು ದೊರೆತಿಲ್ಲ. ಮತ್ತೊಂದೆಡೆ ತ್ಯಾಜ್ಯ ವಿಸರ್ಜನೆ ತಡೆಯುವ ಗಂಭೀರ ಪ್ರಯತ್ನ ನಡೆಯುತ್ತಿಲ್ಲ.
 
ಕೂಡಲೇ ಇದನ್ನು ತಡೆಗಟ್ಟದೇ ಇದ್ದಲ್ಲಿ ಬೈಂದೂರು ವಿಶೇಷ ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಯುವಕರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.