ADVERTISEMENT

`ಪತ್ರಿಕೋದ್ಯಮದಿಂದ ಸಮಾಜ ಪರಿವರ್ತನೆ'

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 10:27 IST
Last Updated 4 ಜುಲೈ 2013, 10:27 IST

ಉಡುಪಿ: `ಕೈಗಾರಿಕ ಕ್ರಾಂತಿಯಂತೆಯೇ ಪತ್ರಿಕೋದ್ಯಮ ಸಮಾಜದ ಪರಿವರ್ತನೆಗೆ ಕಾರಣವಾಗಿದೆ. ಪತ್ರಿಕೋದ್ಯಮವು ಸಮಾಜದ ಆರೋಗ್ಯವನ್ನು ಸುಧಾರಿಸುವ ಮಾಧ್ಯಮವೂ ಆಗಿದೆ' ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಿರಣ್ ಮಂಜನಬೈಲು ಅಭಿಪ್ರಾಯಪಟ್ಟರು.

ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲ್ಲಚ್ಚಿನಿಂದ ಆರಂಭವಾದ ಸಂವಹನ ಮಾಧ್ಯಮ ಇಂದು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬೆಳೆದಿದೆ. ಬೆಳವಣಿಗೆ ಮತ್ತು ಬದಲಾವಣೆ ಪತ್ರಿಕೋದ್ಯಮ ಹಿಡಿದ ಹಾದಿಯೇ ಆಗಿದೆ ಎಂದು ಅವರು ಹೇಳಿದರು.

ಸಿನಿಮಾ ಪ್ರದರ್ಶನವನ್ನು ಉದ್ಘಾಟಿಸಿದ ಉಡುಪಿ ರಂಗಭೂಮಿಯ ಉಪಾಧ್ಯಕ್ಷ ಯು. ಉಪೇಂದ್ರ, ಸಿನಿಮಾ ಕೇವಲ ಮನರಂಜನೆಯ ಸರಕಲ್ಲ. ಜೀವನ  ಮೌಲ್ಯಗಳನ್ನು ಕಲಿಸುವ ಮಾಧ್ಯಮ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಹಾಲಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿಯ ಜೊತೆಕಾರ್ಯದರ್ಶಿ ರವಿರಾಜ್ ಉಪಸ್ಥಿತರಿದ್ದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಬೋರ್ಗಲ್‌ಗುಡ್ಡೆ ಸ್ವಾಗತಿಸಿದರು. ವಿದ್ಯಾರ್ಥಿ ರಾಮಾಂಜಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಪರ್ಣಾ ಸೇನ್ ನಿರ್ದೇಶನದ  ಮಿಸ್ಟರ್ ಆ್ಯಂಡ್ ಮಿಸ್ಸಸ್ ಅಯ್ಯರ್ ಸಿನಿಮಾವನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.