ADVERTISEMENT

ಬಜಗೋಳಿ ಕೃಷಿಮೇಳ ಫೆ.4ರಿಂದ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 9:45 IST
Last Updated 22 ಜನವರಿ 2011, 9:45 IST

ಉಡುಪಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ರಾಜ್ಯ ಮಟ್ಟದ ಕೃಷಿಮೇಳ ಫೆ.4ರಿಂದ 6ರವರೆಗೆ ಕಾರ್ಕಳ ತಾಲ್ಲೂಕಿನ ಬಜಗೋಳಿಯಲ್ಲಿ  ನಡೆಯಲಿದೆ. ಫೆ.4ರಂದು ಕೇಂದ್ರ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಸಿ.ಪಿ.ಜೋಷಿ ಮೇಳ ಉದ್ಘಾಟಿಸುವರು.ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೋಯಿಲಿ, ಕೃಷಿ ಸಚಿವ ಉಮೇಶ್ ವಿ.ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು.

ಫೆ.5ರಂದು ನಡೆಯುವ ಮಹಿಳಾಗೋಷ್ಠಿಯ ಅಧ್ಯಕ್ಷತೆಯನ್ನು ಹೇಮಾವತಿ ವಿ.ಹೆಗ್ಗಡೆ ವಹಿಸುವರು. ಇಂಧನ ಸಚಿವ ಶೋಭಾ ಕರಂದ್ಲಾಜೆ ಉದ್ಘಾಟಿಸುವರು.ಅದೇ ದಿನ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ಸಹಭಾಗಿತ್ವದಲ್ಲಿ ಜಿಲ್ಲಾಮಟ್ಟದ ಜಾನುವಾರು ಪ್ರದರ್ಶನ ನಡೆಯಲಿದೆ. ಬೀದರಿನ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ್ ಎಸ್.ಹೊನ್ನಪ್ಪಗೋಳ ಉದ್ಘಾಟಿಸುವರು.

6ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್, ತೋಟಗಾರಿಕಾ ಸಚಿವ ಎಸ್.ಎ.ರವೀಂದ್ರ ನಾಥ್, ಬಂದರು ಹಾಗೂ ಒಳನಾಡು, ಮೀನುಗಾರಿಕಾ ಸಚಿವ ಕೃಷ್ಣ ಪಾಲೇಮಾರ್ ಭಾಗವಹಿಸುವರು.

ಕೃಷಿಕರಲ್ಲಿ ಉತ್ಸಾಹ ಮೂಡಿಸಿ, ಆತ್ಮವಿಶ್ವಾಸ ಹೆಚ್ಚಿಸುವ ಮೂರು ದಿನಗಳ ಮೇಳದಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಾಗೋಷ್ಠಿಗಳು, ದೃಶ್ಯಶ್ರವಣ ಮಾಧ್ಯಮ ಕೇಂದ್ರ, ಕೃಷಿ ವಸ್ತು ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ಕೃಷಿ ಕೌಶಲ್ಯ ವರ್ಧನೆಗೆ ಸಹಾಯ ಮಾಡಿದರೆ, ಇಲ್ಲಿ ಹಮ್ಮಿಕೊಳ್ಳುವ ಮನರಂಜನಾ ಕಾರ್ಯಕ್ರಮಗಳು ದೂರದಿಂದ ಬಂದ ಕೃಷಿಕರಿಗೆ ಮುದ ನೀಡುತ್ತವೆ. ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ಉಪಯುಕ್ತ ಚಟುವಟಿಕೆ ನಡೆಸುತ್ತಿರುವ ಗ್ರಾಮಾಭಿವೃದ್ಧಿ ಯೋಜನೆ ಮೇಳದ ಒಂದು ದಿನವನ್ನು ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ಮೀಸಲಿಟ್ಟಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.