ADVERTISEMENT

ಬೀಚ್‌ ಅಭಿವೃದ್ಧಿಗೆ ₹ 8 ಕೋಟಿ ಅನುದಾನ 

ಪಡುಬಿದ್ರಿಯಲ್ಲಿ ಮನೋಹರ ಕೆ.ಶೆಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 10:25 IST
Last Updated 3 ಜೂನ್ 2018, 10:25 IST

ಪಡುಬಿದ್ರಿ: ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿರುವ ಪಡುಬಿದ್ರಿ ಬೀಚ್‌ಗೆ  ಬ್ಲೂ ಫ್ಲ್ಯಾಗ್ ಪ್ರಮಾಣಪತ್ರದ ಮಾನ್ಯತೆ ಮಾನ್ಯತೆ ದೊರೆಯುವ ಹಂತದಲ್ಲಿದೆ ಎಂದು ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ ಕೆ.ಶೆಟ್ಟಿ ಹೇಳಿದರು.

ಶನಿವಾರ ಪಡುಬಿದ್ರಿ ಬೀಚ್‌ನಲ್ಲಿ ಉಡುಪಿ ಜಿಲ್ಲಾಡಳಿತ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ, ಮಂಗಳೂರಿನ ಮೀನುಗಾರಿಕಾ ಕಾಲೇಜು, ಸಿ ಕಾಮ್, ಪ್ರವಾಸೋದ್ಯಮ ಇಲಾಖೆ ಹಾಗೂ ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಜಂಟಿ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈಗಾಗಲೇ ಭಾರತದ ವಿವಿಧ ರಾಜ್ಯಗಳ ಹಾಗೂ ಕರ್ನಾಟಕದ ಏಕೈಕ ನೀಲ ಪತಾಕೆ(ಬ್ಲೂ ಫ್ಲ್ಯಾಗ್) ಮಾನ್ಯತೆ ಪಡೆಯಲಿರುವ 13 ಬೀಚ್‌ಗಳಲ್ಲಿ ಪಡುಬಿದ್ರಿಯೂ ಒಂದೂ. ಈ ಬೀಚ್ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲು ₹ 8 ಕೋಟಿ ಅನುದಾನ ದೊರಕಿದೆ. ಪಡುಬಿದ್ರಿ ಕಾಮಿನಿ ಹೊಳೆ ಸ್ವಚ್ಛತೆಗೆ ಹೆಚ್ಚು ನಿಗಾವಹಿಸಬೇಕಾಗಿದೆ.ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಮುತುವರ್ಜಿ  ವಹಿಸಬೇಕು ಎಂದರು ಅವರು ಹೇಳಿದರು.

ADVERTISEMENT

ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಮಾತನಾಡಿ, ಕರಾವಳಿ ಸಮುದ್ರ ತೀರ ಹಲವಾರು ಜನರಿಗೆ ಮೂಲ ಆಧಾರವಾಗಿದೆ. ಅಂತಹ ಕರಾವಳಿಯಲ್ಲಿ `ಪ್ಲಾಸ್ಟಿಕ್ ಬಳಕೆ ಹಿಮ್ಮೆಟ್ಟಿಸಿ' ಅದರ ಬಳಕೆಯನ್ನು ಕಡಿತಗೊಳಿಸುವ ಮೂಲಕ ಉಳಿಸಿಕೊಳ್ಳೋಣ. ನನ್ನ ಬೀಚ್‌ಅನ್ನು ನಾನು ಉಳಿಸಿಕೊಳ್ಳುವುದಾಗಿ ಪಣತೊಟ್ಟು ಮುಂದುವರಿಯೋಣಾ ಎಂದರು.

ಮೀನುಗಾರಿಕಾ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀಪತಿ, ಉಡುಪಿ ಜಿಲ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅಮೀನ್, ಸಿ ಕಾಮ್ ಸ್ವಯಂ ಸೇವಕ ರಾಮ್ಜಿ ವರ್ಮ, ಮೊದಲೈಯರಸನ್, ಆ್ಯಕ್ಟ್‌ನ  ಪ್ರಧಾನ ಕಾರ್ಯದರ್ಶಿ ಗೌರವ ಶೇಣವ, ಅಭಿಜಿತ್, ತಾಲ್ಲೂಕು ಪಂಚಾಯಿತಿ ಸದಸ್ಯೆ ನೀತಾ ಗುರುರಾಜ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮೀ ನಾಯಕ್, ಕರಾವಳಿ ಕಾವಲು ಪಡೆಯ ಎಎಸ್ಐ ಭಾಸ್ಕರ್, ಎಚ್. ಸಿ. ಉದಯ್ ಆರ್. ಬಿ, ಅಮಿತ್, ಮೀನುಗಾರ ಸಮುದಾಯದ ವಿವಿಧ ಸಂಘಟನೆಗಳ ಅಧ್ಯಕ್ಷರಾದ ಸುಕುಮಾರ ಶ್ರೀಯಾನ್, ಶಾಲಾ ವಿದ್ಯಾರ್ಥಿಗಳು, ಪಡುಬಿದ್ರಿ ಸರ್ಕಾರಿ ಪ. ಪೂ. ಕಾಲೇಜು ವಿದ್ಯಾರ್ಥಿಗಳು ಇದ್ದರು. ಬಳಿಕ ಎಲ್ಲರೂ ಪಡುಬಿದ್ರಿ ಬೀಚ್ ಹಾಗೂ ಮನೆಮನೆಗೆ ತೆರಳಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳನ್ನು ಸಂಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.