ADVERTISEMENT

ಬೆಳ್ಮಾರು: ಒಡೆದ ಮದಗಕ್ಕೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 9:55 IST
Last Updated 11 ಜೂನ್ 2011, 9:55 IST

ಬ್ರಹ್ಮಾವರ: ಕುಂಜಾಲು ಮತ್ತು ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೂರು ಗ್ರಾಮದ ಬೆಳ್ಮಾರು ಮೇಲ್ಬೆಟ್ಟಿನ್ಲ್ಲಲಿರುವ ಮದಗದ ಕಟ್ಟೆಯನ್ನು ಸುಮಾರು ರೂ. 32 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಲಾಗುತ್ತಿದೆ.
ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದ ಮದಗದ ಕಟ್ಟೆ ಒಡೆದು ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿತ್ತು.


ಕಾಡು ಪ್ರದೇಶದಲ್ಲಿರುವ ಈ ಮದಗದ ಕಟ್ಟೆ ಕಳೆದ ವರ್ಷದ ಜುಲೈ 15ರಂದು ಸಂಜೆ ಇದ್ದಕ್ಕಿಂದಂತೆ ಒಡೆಯಿತು. ಇದರಿಂದ 11ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ಕೆಲವು ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಮನೆಯ ಒಳಗಡೆಯೂ ಐದಾರು ಅಡಿ ನೀರು ನುಗ್ಗಿತ್ತು. ಮಕ್ಕಳ ಪುಸ್ತಕ, ಬಟ್ಟೆಬರೆ, ಅಕ್ಕಿ, ತೆಂಗಿನಕಾಯಿ, ಚಿನ್ನಾಭರಣವೂ ನೀರು ಪಾಲಾಗಿತ್ತು.

ಸ್ಥಳೀಯರಾದ ಐತ ಪೂಜಾರಿ, ಟಂಕಿ ಪೂಜಾರ‌್ತಿ, ರಾಜು ಪೂಜಾರಿ, ಶೇಖರ ಪೂಜಾರಿ, ಅಕ್ಕಣಿ ಪೂಜಾರ‌್ತಿ, ಅಣ್ಣಯ್ಯ ಪೂಜಾರಿ, ನಾರಾಯಣ ಪೂಜಾರಿ, ಸುಂದರಿ ಪೂಜಾರ‌್ತಿ, ಕಾಳಿ ಪೂಜಾರ‌್ತಿ, ಗುಂಡು ಪೂಜಾರಿ ಮೊದಲಾದವರ ಮನೆಗಳಿಗೆ ನೀರು ನುಗ್ಗಿ ನಷ್ಟ ಉಂಟಾಗಿತ್ತು. ಈ ಬಾರಿ ಮಳೆಗಾಲ ಆರಂಭವಾಗುವ ಮುನ್ನವೇ ಸುಮಾರು 100ಮೀ.ಉದ್ದದ ಒಡೆದು ಹೋದ ಭಾಗವನ್ನು ಶಿಲೆಕಲ್ಲು ಹಾಕಿ ದುರಸ್ತಿಗೊಳಿಸಲಾಗಿದೆ. ಅನೇಕ ವರ್ಷಗಳಿಂದ ಮದಗದಲ್ಲಿ ಶೇಖರವಾಗಿದ್ದ ಹೂಳನ್ನು ಸಂಪೂರ್ಣವಾಗಿ ತೆಗೆಯಲಾಗಿದೆ. ಶೇ.75ರಷ್ಟು ಕೆಲಸ ಈಗಾಗಲೇ ಪೂರ್ಣಗೊಂಡಿದ್ದು, ಮಳೆ ಆರಂಭವಾದುದರಿಂದ ಉಳಿದ ಕಾಮಗಾರಿಯನ್ನು ಅಕ್ಟೋಬರ್, ನವೆಂಬರ್‌ನಲ್ಲಿ ಮಾಡಲಾಗುವುದು ಎಂದು ಗುತ್ತಿಗೆದಾರ ಪ್ರವೀಣ್ ಕುಮಾರ್ ಶೆಟ್ಟಿ, ಪ್ರಜಾವಾಣಿಗೆ ತಿಳಿಸಿದ್ದಾರೆ.

ಅಂತರ್ಜಲ ವೃದ್ಧಿ:ಮದಗದ ಮಾಹಿತಿ ನೀಡಿದ ಜಿ.ಪಂ. ಎಂಜಿನಿಯರ್ ಎಂ.ಸೋಮನಾಥ್ ಉಪ್ಪೂರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 29 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಮದಗದಿಂದ ಉಪ್ಪೂರು ಮತ್ತು ಕುಂಜಾಲು ಪಂಚಾಯಿತಿಗಳಿಗೆ ಸೇರಿದ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ನೀರಿನ ಆಶ್ರಯ ದೊರಕುತ್ತದೆ.

ಉಪ್ಪೂರು ಗ್ರಾ.ಪಂ.ವ್ಯಾಪ್ತಿಯ ಸುಮಾರು 10 ಕೊರಗ ಕುಟುಂಬಗಳು, ಕುಂಜಾಲು ಗ್ರಾಮ ಪಂಚಾಯಿತಿಯ ಐವತ್ತಕ್ಕೂ ಹೆಚ್ಚು ಕುಟುಂಬಗಳು ಎದುರಿಸುತ್ತಿದ್ದ  ನೀರಿನ ಸಮಸ್ಯೆ ದೂರವಾಗುತ್ತಿದೆ. ಕೃಷಿಕರು ನಿರಂತರವಾಗಿ ಏಪ್ರಿಲ್, ಮೇ ವರೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಈಗಾಗಲೇ ರೂ. 12 ಲಕ್ಷದ ಕಾಮಗಾರಿ ಮುಗಿದಿದ್ದು, ಮಳೆ ಕಡಿಮೆಯಾದ ಕೂಡಲೇ  ಕಾಮಗಾರಿ ಪೂರ್ಣಗೊಳಿಸಲಾಗುವುದು. ಸುಮಾರು 100್ಡ100 ವಿಸ್ತೀರ್ಣ ಇರುವ ಮದಗ ಪ್ರವಾಸಿಗರನ್ನು ಆಕರ್ಷಿಸುವ ತಾಣವೂ ಆಗಲಿದೆ ಎಂದು ತಿಳಿಸಿದ್ದಾರೆ.

`ಪ್ರಜಾವಾಣಿ~ ಜತೆ ಮಾತನಾಡಿದ ಉಪ್ಪೂರು ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಕುಮಾರ್, ಪಂಚಾಯಿತಿ ವ್ಯಾಪ್ತಿಯ 10ಕ್ಕೂ ಹೆಚ್ಚು ಕೊರಗರ ಕಾಲೊನಿಯಲ್ಲಿ ಇದ್ದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿದೆ. ಇದೀಗ ಕೊರಗರಿಗೆ ಬಾವಿಯೊಂದನ್ನು ನಿರ್ಮಿಸಿ ಕೊಡಲಾಗುತ್ತಿದ್ದು, ಈ ಮದಗದ ದುರಸ್ತಿ ಕಾರ್ಯದಿಂದ ಅಂತರ್ಜಲ ಹೆಚ್ಚಾಗಲಿದೆ. ಮದಗವನ್ನು ಅಭಿವೃದ್ಧಿಪಡಿಸಿ ಬೋಟ್ ರೇಸಿಂಗ್ ವ್ಯವಸ್ಥೆ ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದರು.

ಬೆಳ್ಮಾರು ಪ್ರದೇಶದ ನೂರಾರು ಎಕರೆ ಕೃಷಿ ಭೂಮಿಗೆ ಪ್ರಯೋಜನವಾಗಲಿದೆ. ಪರಿಸರದ 50ಕ್ಕೂ ಹೆಚ್ಚಿನ ಮನೆಗಳ ಬಾವಿಯಲ್ಲಿ ಅಂತರ್ಜಲ ಹೆಚ್ಚಿ ಏಪ್ರಿಲ್, ಮೇ ತಿಂಗಳಲ್ಲಿ ಎದುರಿಸುತ್ತಿದ್ದ ನೀರಿನ ಅಭಾವಕ್ಕೆ ಪರಿಹಾರ ಸಿಕ್ಕಿದೆ ಎಂದು ಕುಂಜಾಲು ಗ್ರಾ.ಪಂ.ಉಪಾಧ್ಯಕ್ಷ ರಾಜು ಕುಲಾಲ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.