ADVERTISEMENT

ಬ್ರಹ್ಮಾವರದ 4 ಗ್ರಾ.ಪಂ.ವ್ಯಾಪ್ತಿಯಲ್ಲಿ ಬಂದ್ ಇಂದು

ಮೇಲ್ಸೇತುವೆ, ನೆಲಮಟ್ಟದಲ್ಲಿ ರಸ್ತೆ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 10:27 IST
Last Updated 19 ಸೆಪ್ಟೆಂಬರ್ 2013, 10:27 IST
ಬ್ರಹ್ಮಾವರದ ಬಸ್ ನಿಲ್ದಾಣದ ಬಳಿ ಇರುವ ಹೆದ್ದಾರಿ ಮತ್ತು ಕುಂಜಾಲು ಪೇತ್ರಿಗೆ ಸಾಗುವ ರಸ್ತೆಯ ಆಕರ್ಷಕ ನೋಟ.
ಬ್ರಹ್ಮಾವರದ ಬಸ್ ನಿಲ್ದಾಣದ ಬಳಿ ಇರುವ ಹೆದ್ದಾರಿ ಮತ್ತು ಕುಂಜಾಲು ಪೇತ್ರಿಗೆ ಸಾಗುವ ರಸ್ತೆಯ ಆಕರ್ಷಕ ನೋಟ.   

ಬ್ರಹ್ಮಾವರ: ಮೇಲ್ಸೇತುವೆ, ನೆಲ ಮಟ್ಟದಲ್ಲೇ ರಸ್ತೆ ನಿರ್ಮಾಣ ಮಾಡ ಬೇಕು ಎಂದು ಒತ್ತಾಯಿಸಿ ಬ್ರಹ್ಮಾ ವರದ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿ ಗುರುವಾರ ಬಂದ್‌ಗೆ ಕರೆ ನೀಡಿದೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪ್ರಾರಂಭವಾದ ದಿನದಿಂದ ಬ್ರಹ್ಮಾವರದಲ್ಲಿ ಹಲವು  ಸಮಸ್ಯೆಗಳು ಮತ್ತು ಉದ್ದೇಶಿತ ಅಂಡರ್‌ಪಾಸ್ ನಿರ್ಮಾಣದಿಂದ ತೊಂದರೆಯಾ ಗುತ್ತಿದ್ದು, ಗುರುವಾರ ಕರೆ ನೀಡಿರುವ ಬಂದ್ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ನಗರದ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ. ವಾರಂಬಳ್ಳಿ ಯುವಕ ಮಂಡಲ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ನೀಡಿವೆ.

ನಗರದ ಬಸ್ ನಿಲ್ದಾಣದಿಂದ ಮುಂದೆ ಅಂಡರ್‌ಪಾಸ್ ರಚನೆಗೆ ಪ್ರಾರಂಭವಾದ ದಿನದಿಂದ ಇದನ್ನು ವಿರೋಧಿಸಿ ಜನಪ್ರತಿನಿಧಿಗಳಿಗೆ, ಹೆದ್ದಾರಿ ಪ್ರಾಧೀಕಾರಕ್ಕೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಅಂಡರ್‌ಪಾಸ್ ನಿರ್ಮಾಣವಾಗುವುದರಿಂದ ಬ್ರಹ್ಮಾವರದಿಂದ ಕುಂಜಾಲು ಪೇತ್ರಿ ಕಡೆ ಹೋಗುವ ದಾರಿ ಬಗ್ಗೆ, ಬ್ರಹ್ಮಾವರದ ಬಸ್ ನಿಲ್ದಾಣದ ಮತ್ತು ಒಳಪೇಟೆ ಪ್ರವೇಶಿಸುವ ಬಗ್ಗೆ, ಬಾರ್ಕೂರು, ಮಂದಾರ್ತಿ ಪ್ರದೇಶಗಳಿಗೆ ಉಡುಪಿ ಮತ್ತು ಕುಂದಾಪುರ ಕಡೆಯಿಂದ ಬರುವ ವಾಹನಗಳು ಹೆದ್ದಾರಿಗೆ ಪ್ರವೇಶ ಮಾಡುವ ಬಗ್ಗೆ ಬಹಳಷ್ಟು ಗೊಂದಲ ಉಂಟಾಗಿದೆ.

ಇದರೊಂದಿಗೆ ಪ್ರಸ್ತುತ ಬಾರ್ಕೂರಿನಿಂದ ಉಡುಪಿ ಕಡೆ, ಬ್ರಹ್ಮಾವರ ಒಳಪೇಟೆಯಿಂದ ಬಂದ ವಾಹನಗಳು ಹೆದ್ದಾರಿಗೆ ಬರುವುದು ಕೂಡಾ ಬಹಳಷ್ಟು ಅಪಾಯಕಾರಿ. ನಗರದ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಸಂತೆ ಮಾರ್ಕೆಟ್‌ಗಳಿಗೆ ಹೋಗುವ ಮಾರ್ಗಗಳ ಬಗ್ಗೆ ಸಂಪೂರ್ಣ ಗೊಂದಲಮಯ, ಅಪಾಯಕಾರಿ, ಪೂರ್ವಯೋಜಿತವಲ್ಲದ ನಕಾಶೆ ಯೊಂದಿಗೆ ರಸ್ತೆ ರಚನೆ ಕಾಮಗಾರಿ ನಡೆಯುತ್ತಿದೆ.

ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳ ಜೀವಕ್ಕೆ ಅಪಾಯ ತಂದೊಡ್ಡಲಿದೆ. ಇದನ್ನು ತಪ್ಪಿಸಲು ಮೇಲ್ಸೇತುವೆ ಅಗತ್ಯ  ಎಂಬುದು ಸ್ಥಳೀಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.