ADVERTISEMENT

ಭಾರತಕ್ಕೆ ಎಚ್ಚರಿಕೆ ಕರೆಗಂಟೆ: ಪುರಾಣಿಕ್

ಬೌದ್ಧ ದೇವಾಲಯ ದಾಳಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 10:04 IST
Last Updated 22 ಜುಲೈ 2013, 10:04 IST
ವಿಶ್ವಹಿಂದು ಪರಿಷದ್ ಬಜರಂಗದಳ ಉಡುಪಿ ಪುತ್ತೂರಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶವನ್ನು ವಿಶ್ವಹಿಂದು ಪರಿಷತ್ ಸಂಘಟನಾ ಕಾರ್ಯದರ್ಶಿ ಎಂ.ಬಿ.ಪುರಾಣಿಕ್ ಉದ್ಘಾಟಿಸಿದರು.	ಪ್ರಜಾವಾಣಿ ಚಿತ್ರ
ವಿಶ್ವಹಿಂದು ಪರಿಷದ್ ಬಜರಂಗದಳ ಉಡುಪಿ ಪುತ್ತೂರಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶವನ್ನು ವಿಶ್ವಹಿಂದು ಪರಿಷತ್ ಸಂಘಟನಾ ಕಾರ್ಯದರ್ಶಿ ಎಂ.ಬಿ.ಪುರಾಣಿಕ್ ಉದ್ಘಾಟಿಸಿದರು. ಪ್ರಜಾವಾಣಿ ಚಿತ್ರ   

ಉಡುಪಿ: `ಟಿಬೆಟ್‌ನ ಬೌದ್ಧ ದೇವಾಲಯದ ಮೇಲಿನ ದಾಳಿ ಭಾರತಕ್ಕೆ ಎಚ್ಚರಿಕೆಯ ಕರೆ ಗಂಟೆ. ವಿರೋಧಿ ದೇಶಗಳು ಚೀನಾದೊಂದಿಗೆ ಕೈಜೋಡಿಸಿ ಭಾರತದ ಮೇಲೆ ಆಕ್ರಮಣ ಮಾಡಬಹುದು. ಅದಕ್ಕಾಗಿ ಹಿಂದೂಗಳು ಎಚ್ಚರದಿಂದಿರಬೇಕು' ಎಂದು ವಿಶ್ವಹಿಂದು ಪರಿಷತ್ ಸಂಘಟನಾ ಕಾರ್ಯದರ್ಶಿ ಎಂ.ಬಿ.ಪುರಾಣಿಕ್ ಹೇಳಿದರು.

ವಿಶ್ವಹಿಂದು ಪರಿಷದ್ ಬಜರಂಗದಳ ಉಡುಪಿ ಪುತ್ತೂರಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂ ಧರ್ಮಗ್ರಂಥ ಕೇವಲ ಕಟ್ಟುಪಾಡುಗಳ ಬೋಧನೆಯಲ್ಲ, ಅದು ರಾಷ್ಟ್ರದ ಜೀವನ ಪ್ರತೀಕವಾಗಿದೆ. ಹಿಂದಿನ ಕಾಲದಿಂದಲೂ ಆಚರಣೆಯಲ್ಲಿರುವ ಜೀವನ ಕ್ರಮ ಹಿಂದೂ ಧರ್ಮದಲ್ಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಸನಾತನ ಹಿಂದೂ ಸಂಸ್ಕೃತಿಯ ಬಗ್ಗೆ ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಮಧ್ವಚಾರ್ಯರು ಅವರವರ ಅಭಿಪ್ರಾಯದಲ್ಲಿ ತತ್ವಗಳನ್ನು ಪ್ರಚಾರ ಮಾಡಿದ್ದಾರೆ. ಹಿಂದುಗಳು ಎಂದೂ ಅವರನ್ನೂ ಧರ್ಮದ್ರೋಹಿಗಳೆಂದು ಕರೆಯಲಿಲ್ಲ. ವೈಚಾರಿಕ ಸ್ವಾತಂತ್ರ್ಯ ಸನಾತನ ಧರ್ಮದ ಜೀವನ ಪದ್ಧತಿಯಾಗಿದೆ ಎಂದರು.

`ತಮಿಳುನಾಡಿನಲ್ಲಿ ಮೂಲಭೂತವಾದಿಗಳು ಹಿಂದೂ ಚಿಂತಕರನ್ನು ಹಾಗೂ ಅನುಯಾಯಿಗಳನ್ನು ಕೊಲ್ಲುತ್ತಿದ್ದು, ಇದು ಹಿಂದೂ ದೇಶದ ಜನರು ಸುರಕ್ಷಿತವಲ್ಲ ಎಂಬುದನ್ನು ತೋರಿಸುತ್ತಿದೆ. 2011ರ ಜನಗಣತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗುತ್ತಿದ್ದಾರೆ. ಮನೆಯಿಂದಲೇ ಗೋವುಗಳ ಕಳ್ಳ ಸಾಗಾಣಿಕೆಯಾಗುತ್ತಿದ್ದರೂ ಹಿಂದೂಗಳು ಮೂಕ ಪ್ರೇಕ್ಷಕರಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು  ಪ್ರತಿ ಹಿಂದೂಗಳ ಮನೆಯನ್ನು ಸಂಪರ್ಕಿಸಿ ಹಿಂದೂಗಳ ಮೇಲೆ ನಡೆಯುವ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸಬೇಕು' ಎಂದು ಹೇಳಿದರು.

ವಿಶ್ವಹಿಂದು ಪರಿಷತ್ ಉಡುಪಿ ಸಂಚಾಲಕ ಶಂಭು ಶೆಟ್ಟಿ, ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ಉದ್ಯಮಿ ಪೃಥ್ವಿಕ್ ನಾಯಕ್, ಪ್ರಚಾರಕ ಜಿ.ಸುಧಾಕರ್ ಉಪಸ್ಥಿತರಿದ್ದರು. ಬಜರಂಗದಳ ಜಿಲ್ಲಾ ಸಂಚಾಲಕ ಕೆ.ಆರ್. ಸುನಿಲ್ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.