ADVERTISEMENT

ಭ್ರಷ್ಟ ರಾಜಕಾರಣಿಗಳಿಗೆ ಶಿಕ್ಷೆ ಇಲ್ಲ: ಎಬಿವಿಪಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 10:00 IST
Last Updated 18 ಫೆಬ್ರುವರಿ 2011, 10:00 IST

ಕುಂದಾಪುರ: ಈ ದೇಶದಲ್ಲಿ ಸಣ್ಣ ತಪ್ಪು ಮಾಡುವ ಸಾಮಾನ್ಯ ಜನರಿಗೆ ಕಠಿಣ ಶಿಕ್ಷೆಯಾಗುತ್ತಿದೆ. ಆದರೆ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯುವ ಭ್ರಷ್ಟ ರಾಜಕಾರಣಿಗಳಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ. ಸಾಮಾನ್ಯ ಜನರಿಗೆ ಒಂದು ನ್ಯಾಯವಾದರೆ ದೊಡ್ಡವರಿಗೆ ಒಂದು ಎನ್ನುವ ನ್ಯಾಯದ ಪರಿಪಾಲನೆಯಾಗುತ್ತಿದೆ. ಇದಕ್ಕೆಲ್ಲ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ಪ್ರಕರಣಗಳೇ ತಾಜಾ ಉದಾಹರಣೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಬಿ.ಹರ್ಷ ತಿಳಿಸಿದರು.

ಕುಂದಾಪುರ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಗುರುವಾರ ನಡೆದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ವಕೀಲ ಸುವೃತ್‌ಕುಮಾರ್ ಕಾರ್ಕಳ ದಿಕ್ಸೂಚಿ ಭಾಷಣ ಮಾಡಿದರು, ಕೋಟೇಶ್ವರ ಸರ್ಕಾರಿ ಕಾಲೇಜು ಉಪನ್ಯಾಸಕ ಆನಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಸಂಚಾಲಕ ಅಮೃತ ಆಳ್ವ ಹಾಗೂ ತಾಲ್ಲೂಕು ಸಂಚಾಲಕ ಸಂಕೇತ ಶೆಟ್ಟಿ ಅತಿಥಿಗಳಾಗಿದ್ದರು.


ಸಭಾ ಕಾರ್ಯಕ್ರಮದ ಬಳಿಕ ನಡೆದ ಶೋಭಾಯಾತ್ರೆಯನ್ನು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೆ.ಪ್ರೇಮಾನಂದ ಶೆಟ್ಟಿ ಹಾಗೂ ಜಿಲ್ಲಾ ಬಜರಂಗ ದಳ ಸಂಚಾಲಕ ಗಿರೀಶ್ ಕುಂದಾಪುರ ಉದ್ಘಾಟಿಸಿದರು. ಸೃಜಿತ್ ಶೆಟ್ಟಿ, ಕಾಲೇಜು ವಿದ್ಯಾರ್ಥಿ ಸಂಘಟನೆ ಪ್ರಮುಖರಾದ ಮಂಜುನಾಥ ಪೂಜಾರಿ ಕಟ್‌ಬೇಲ್ತೂರ ಕುಂದಾಪುರ, ಗುರುರಾಜ್ ಬಸ್ರೂರು, ಪ್ರವೀಣ್ ಕುಲಾಲ್ ಕುಂದಾಪುರ, ಮಿಥುನ್, ಪ್ರದೀಪ್ ಶೆಟ್ಟಿ ಚಿತ್ತೂರು, ಭಂಡಾರ್‌ಕಾರ್ಸ್‌ ಕಾಲೇಜಿನ ಎಬಿವಿಪಿ ಸಂಘಟನೆ ಪ್ರಮುಖ್ ಕೆ.ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.