ADVERTISEMENT

ಮಾಸಾಂತ್ಯಕ್ಕೆ ಬಿಪಿಎಲ್ ಪಡಿತರ ಚೀಟಿ ವಿತರಣೆ: ಸಿಎಂ ಕಟ್ಟಪ್ಪಣೆ

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST

ಮಂಗಳೂರು: ಆನ್‌ಲೈನ್ ಮೂಲಕ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಈ ತಿಂಗಳ ಅಂತ್ಯದ ಒಳಗೆ ಪಡಿತರ ಚೀಟಿ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದಕ್ಕೆ ತಪ್ಪಿದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ ಇದೇ ಪ್ರಥಮ ಬಾರಿಗೆ ಭಾನುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ತವರು ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇದೇ 10ರೊಳಗೆ ಅರ್ಜಿಗಳ ಪರಿಶೀಲನೆ ನಡೆಸಬೇಕು, 20ರೊಳಗೆ ಪಡಿತರ ಚೀಟಿಗಳನ್ನು ಮುದ್ರಿಸಬೇಕು, 31ರೊಳಗೆ ವಿತರಿಸಬೇಕು ಎಂದು ತಿಳಿಸಲಾಗಿದೆ. ಜಿಲ್ಲೆಗಳಲ್ಲೇ ಪಡಿತರ ಚೀಟಿ ಮುದ್ರಿಸುವ ವ್ಯವಸ್ಥೆ ಇರುವುದರಿಂದ ಈ ವಿಚಾರದಲ್ಲಿ ಯಾವುದೇ ವಿಳಂಬ ಆಗುವುದಕ್ಕೆ ಅವಕಾಶವೇ ಇಲ್ಲ. ಆದ್ಯತೆಯ ಮೇರೆಗೆ ಬಿಪಿಎಲ್ ಚೀಟಿಗಳನ್ನು ಮೊದಲಾಗಿ ನೀಡಿದ ಬಳಿಕ ಎಪಿಎಲ್ ಕಾರ್ಡ್‌ಗಳನ್ನೂ ಶೀಘ್ರ ವಿತರಿಸಲಾಗುವುದು. ಬಯಲುಸೀಮೆಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿರೋಧ ಇದ್ದರೂ ಅದನ್ನು ಜಾರಿಗೆ ತರಲು ಸರ್ಕಾರ ಸಂಕಲ್ಪ ಮಾಡಿದೆ. `ಸಕಾಲ~ ಯೋಜನೆಗೆ ಇನ್ನೂ ಸುಮಾರು 40 ಸೇವೆಗಳನ್ನು ಸೇರಿಸುವ ಮೂಲಕ 200 ವಿಷಯಗಳಲ್ಲಿ ಜನರಿಗೆ ತ್ವರಿತ ಸೇವೆ ಒದಗಿಸಲಾಗುವುದು ಎಂದರು.

ಸಕ್ರಮ:  ಸರ್ಕಾರಿ ನಿವೇಶನಗಳಲ್ಲಿ ನೆಲೆಸಿರುವವರನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ 94 ಸಿ ತಿದ್ದುಪಡಿಗೆ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ರೂಪಿಸುತ್ತಿದೆ. ಇದೇ 9ರೊಳಗೆ ಅದನ್ನು ಅಂತಿಮಗೊಳಿಸಲಾಗುವುದು. ಫಲಾನುಭವಿಗಳು ಎಷ್ಟು ಸಮಯದಿಂದ ಸ್ಥಳದಲ್ಲಿ ನೆಲೆಸಿರಬೇಕು ಎಂಬಂತಹ ವಿಚಾರಗಳನ್ನು ಮಾರ್ಗಸೂಚಿಯಲ್ಲಿ ಸೇರಿಸಲಾಗುವುದು ಎಂದು ಸದಾನಂದ ಗೌಡ ಹೇಳಿದರು.

ಅಕ್ರಮ- ಸಕ್ರಮ ಸಂಬಂಧ ವಾರದೊಳಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು. ಬಳಿಕ ಅಕ್ರಮ ಸಕ್ರಮ ಸಮಿತಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.