ADVERTISEMENT

ಮೆಸ್ಕಾಂ ಕಚೇರಿಗೆ ಗ್ರಾಹಕರ ಮುತ್ತಿಗೆ

ವಿದ್ಯುತ್ ಕಡಿತ: ಅಧಿಕಾರಿಯ ವರ್ಗಾವಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 10:33 IST
Last Updated 13 ಜೂನ್ 2018, 10:33 IST

ಪಡುಬಿದ್ರಿ: ಅನಿಯಮಿತವಾಗಿ ವಿದ್ಯುತ್ ಕಡಿತ ಮತ್ತಿತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸಾರ್ವಜನಿಕರು ಪಡುಬಿದ್ರಿ ಮೆಸ್ಕಾಂ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು.

ಪ್ರತಿಭಟನೆಯಲ್ಲಿ ಪಡುಬಿದ್ರಿ, ಪಾದೆಬೆಟ್ಟು, ಹೆಜಮಾಡಿ, ಎರ್ಮಾಳು, ಎಲ್ಲೂರು, ಬಡಾ ಗ್ರಾಮಗಳ ಗ್ರಾಮಸ್ಥರು ಮೆಸ್ಕಾಂ ಕಚೇರಿ ಎದುರು ಜಮಾಯಿಸಿ, ಮೆಸ್ಕಾಂ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಮಳೆಗಾಲ ಆರಂಭವಾದ ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗುತ್ತಿದ್ದು, ಸಮಸ್ಯೆಗೆ ಮೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಿರ್ವಹಣೆ ನೆಪದಲ್ಲಿ ಪ್ರತೀ ಗುರುವಾರ ವಿದ್ಯುತ್ ಕಡಿತ ಮಾಡಿದರೂ ಯಾವುದೇ ಸಮಸ್ಯೆಗಳನ್ನು ಬಗೆಹರಿಸದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹೊಸದಾಗಿ ನೇಮಕಗೊಂಡ ಸಹಾಯಕ ಎಂಜಿನಿಯರ್ ಸುಧೀರ್ ಪಟೇಲ್ ಮತ್ತು ಕಾರ್ಯನಿರ್ವಹಿಸುವ 13 ಸಿಬ್ಬಂದಿಯ ಮಧ್ಯೆ ಹೊಂದಾಣಿಕೆ ಕೊರತೆಯಿಂದ ಸಮಸ್ಯೆ ಬಿಗಡಾಯಿಸಿದೆ. ಸುಧೀರ್ ಪಟೇಲ್ ಗ್ರಾಹಕರ ಯಾವುದೇ ದೂರವಾಣಿ ಕರೆ ಸ್ವೀಕರಿಸದಿರುವ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕೆಲವೆಡೆ ಹಲವು ದಿನಗಳಿಂದ ವಿದ್ಯುತ್ ಸಂಪರ್ಕ ಒದಗಿಸಿಲ್ಲ. ಸರಿಯಾಗಿ ಕರ್ತವ್ಯ ನಿರ್ವಹಿಸದ ಸುಧೀರ್ ಪಟೇಲ್‌ರನ್ನು ವರ್ಗಾವಣೆ
ಗೊಳಿಸಬೇಕೆಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಈ ಬಗ್ಗೆ ಇಲಾಖಾ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಕಾಪು ಮೆಸ್ಕಾಂ ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಜೆ.ಪಿ. ರಾಮ್ ಭರವಸೆ ನೀಡಿದರು.

ಕಾಪು ಕ್ಷೇತ್ರ ವ್ಯಾಪ್ತಿಯ ಕೆಲವೆಡೆ ಗಂಭೀರ ಸಮಸ್ಯೆ ಇದ್ದರೂ ಬಹುಬೇಗ ಸಮಸ್ಯೆ ಪರಿಹಾರಗೊಂಡಿದೆ. ಆದರೆ, ಅತೀ ಕಡಿಮೆ ಸಮಸ್ಯೆ ಇರುವ ಪಡುಬಿದ್ರಿ ಭಾಗದಲ್ಲಿ ನಿರ್ಲಕ್ಷ್ಯ ಮಾಡದೇ ತಕ್ಷಣ ಸಮಸ್ಯೆ ಪರಿಹರಿಸಬೇಕೆಂದು ಶಾಸಕ ಲಾಲಾಜಿ ಆರ್. ಮೆಂಡನ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮೆಸ್ಕಾಂ ಹಿರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಶರತ್ ಪಾಲ್ ಉಪಸ್ಥಿತಿಯಲ್ಲಿ ಕಾಪು ಮೆಸ್ಕಾಂ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಲಾಗುವುದು ಎಂದು ಲಾಲಾಜಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನೀತಾ ಗುರುರಾಜ್, ದಿನೇಶ್ ಕೋಟ್ಯಾನ್ ಪಲಿಮಾರು, ವಿಶುಕುಮಾರ್ ಶೆಟ್ಟಿಬಾಲ್, ವಿಷ್ಣುಮೂರ್ತಿ ಆಚಾರ್ಯ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಿಥುನ್ ಆರ್,ಹೆಗ್ಡೆ, ಸುಧಾಕರ ಶೆಟ್ಟಿ ಹೆಜಮಾಡಿ, ರಮಾಕಾಂತ ದೇವಾಡಿಗ, ವಿಠಲ ಮಾಸ್ಟರ್, ಹರೀಶ್ ಕುಮಾರ್ ಶೆಟ್ಟಿ ಪಾದೆಬೆಟ್ಟು, ರಮೀಝ್ ಹುಸೈನ್, ಮ್ಯಾಕ್ಸಿಂ ಡಿಸೋಜಾ, ರವಿ ಶೆಟ್ಟಿ, ರಮೇಶ್ ಶೆಟ್ಟಿ, ಜಗದೀಶ ಶೆಟ್ಟಿ, ಕೌಸರ್ ಪಡುಬಿದ್ರಿ, ಬಾಲಕೃಷ್ಣ ದೇವಾಡಿಗ, ಜಯ ಸಾಲ್ಯಾನ್, ಅಶೋಕ್ ಸಾಲ್ಯಾನ್, ರಾಜೇಶ್ ಕೋಟ್ಯಾನ್, ಹಸನ್ ಕಂಚಿನಡ್ಕ, ಮೆಸ್ಕಾಂ ಎಇ ಜಯಸ್ಮಿತಾ ಉಪಸ್ಥಿತರಿದ್ದರು.

10 ದಿನ ಕಾಲಾವಕಾಶ ಕೊಡಿ

ಕಾಪು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜೆ.ಪಿ.ರಾಮ ಮಾತನಾಡಿ, ‘ಕಳೆದೊಂದು ವಾರದಿಂದ ಗಾಳಿ ಮಳೆಯಿಂದ ತೊಂದರೆಗಳಾಗಿವೆ. 10 ದಿನಗಳ ಕಾಲಾವಕಾಶ ನೀಡಿ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಪ್ರಯತ್ನಿಸಲಾಗುವುದು. ಸಿಬ್ಬಂದಿ ಕೊರತೆಯಿಂದ ರಾತ್ರಿ ಪಾಳಿಯಲ್ಲಿ ಯಾರು ಕರ್ತವ್ಯ ನಿರ್ವಹಿಸುತ್ತಿಲ್ಲ. ಇದ್ದ ಸಿಬ್ಬಂದಿಯೇ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಜನರ ಬೇಡಿಕೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.