ADVERTISEMENT

ಯಕ್ಷಗಾನದ ಉಳಿವಿಗೆ ಶ್ರಮಿಸಿ: ಪ್ರಭಾಕರ ಜೋಷಿ

​ಪ್ರಜಾವಾಣಿ ವಾರ್ತೆ
Published 23 ಮೇ 2012, 9:05 IST
Last Updated 23 ಮೇ 2012, 9:05 IST

ಬ್ರಹ್ಮಾವರ: `ಇತಿಹಾಸ ವೇಗವಾಗಿ ಓಡಿದರೂ ಯಕ್ಷಗಾನ ಚಿರಸ್ಥಾಯಿಯಾಗಿ ಇಂದಿಗೂ ಉಳಿದಿದೆ. ಸಮಾಜದ ಅನೇಕ ಬದಲಾವಣೆ, ಎಲೆಕ್ಟ್ರಾನಿಕ್ ಮಾಧ್ಯಮಗಳ ನಡುವೆಯ ಸ್ಪರ್ಧೆಯ ಈ ಸಂದರ್ಭ ಯಕ್ಷಗಾನದ ಉಳಿವಿಗೆ ಎಲ್ಲರೂ ಶ್ರಮಿಸಬೇಕಾಗಿದೆ~ ಎಂದು ಖ್ಯಾತ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಹೇಳಿದರು.

ಸಾಲಿಗ್ರಾಮ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಮಂಗಳವಾರ ಸಂಜೆ ಕಾರ್ಕಡ ಗೆಳೆಯರ ಬಳಗ, ಮಂಗಳೂರು ಕಲ್ಕೂರ ಪ್ರತಿಷ್ಠಾನ ಮತ್ತು ಕೋಟ ರಂಗ ಬಳಗದ ಆಶ್ರಯದಲ್ಲಿ ನಡೆದ ಯಜಮಾನ ಪಾರಂಪಳ್ಳಿ ಶ್ರೀಧರ್ ಹಂದೆ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಕುಂಠಿತಗೊಳ್ಳುತ್ತಿವೆ. ಯಕ್ಷಗಾನ ಕಲೆಯಿಂದ ಮಾತ್ರ ಕನ್ನಡ ಮಾಧ್ಯಮ ಶಾಲೆಗಳು ಉಳಿಯಲು ಸಾಧ್ಯ. ಡಾ.ಶಿವರಾಮ ಕಾರಂತ ಓಡಾಡಿದ, ರಾಮ ಗಾಣಿಗರಂತಹ ಖ್ಯಾತ ಕಲಾವಿದರು ಕುಣಿದಾಡಿದ ಭೂಮಿಯಲ್ಲಿ ಯಕ್ಷಗಾನ ಎಂದೂ ಅಳಿಯುವುದಿಲ್ಲ. ಹಂದೆಯವರಂತಹ ಯಕ್ಷಗಾನ ರಕ್ಷಕರು ಯಕ್ಷಗಾನ ರಂಗಭೂಮಿಗೆ ಬೇಕು ಎಂದರು.

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕಲ್ಕೂರ ಮಾತನಾಡಿ ಆಧುನಿಕತೆಯ ಇಂದಿನ ಯುಗದಲ್ಲಿ ಪುರಾಣ ಕಥೆಗಳನ್ನು ಮಕ್ಕಳಿಗೆ ತಿಳಿ ಹೇಳುವ ಅಗತ್ಯತೆ ಇದೆ. ಇದು ಯಕ್ಷಗಾನದಿಂದ ಸಾಧ್ಯ. ನಮ್ಮ ಸಂಪ್ರದಾಯ, ಸಂಸ್ಕೃತಿ ಶಿಕ್ಷಣದಿಂದ ಹಾಳಾಗಿದೆ. ಶಿಕ್ಷಣದ ನೀತಿಯಿಂದಾಗಿ ಮಕ್ಕಳಲ್ಲಿ ಸ್ವಂತಿಕೆಯ ಕಲೆ ಹೋಗುತ್ತಿದೆ. ಸಾಮಾನ್ಯ ಜ್ಞಾನದ ಅರಿವಿಲ್ಲ. ಸುಸಂಸ್ಕೃತ, ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಬೆಳೆಸುವ ಸಂಪ್ರದಾಯ ಮತ್ತು ಶಿಕ್ಷಣ ನಮ್ಮಲ್ಲಿ ಬರಬೇಕು ಎಂದರು.

ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನೀಲಾವರ ಸುರೇಂದ್ರ ಅಡಿಗ ಮತ್ತು ಪ್ರದೀಪ್ ಕುಮಾರ್ ಕಲ್ಕೂರ ಅವರನ್ನು ಗೌರವಿಸಲಾಯಿತು.

ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎನ್.ಪ್ರಭಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಹೆಚ್.ಶ್ರೀಧರ್ ಹಂದೆ, ಎಚ್.ಜನಾರ್ಧನ ಹಂದೆ, ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ರಂಗ ಬಳಗದ ಚಂದ್ರ ಆಚಾರ್, ಸುಜಯೀಂದ್ರ ಹಂದೆ, ಗೆಳೆಯರ ಬಳಗದ ಶಿವರಾಂ ಮತ್ತಿತರರು ಇದ್ದರು. ನಂತರ ಅತಿಕಾಯ ಮೋಕ್ಷ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.