ADVERTISEMENT

ಯಕ್ಷಗಾನ ಸಂಸ್ಕೃತಿ ಶಿಕ್ಷಣದ ಪ್ರಬಲ ಮಾಧ್ಯಮ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 6:35 IST
Last Updated 22 ಅಕ್ಟೋಬರ್ 2012, 6:35 IST

ಉಪ್ಪುಂದ (ಬೈಂದೂರು): ಯಕ್ಷಗಾನವು ಜನರಲ್ಲಿ ಪುರಾಣ ಪ್ರಜ್ಞೆಯನ್ನು ಬೆಳೆಸುತ್ತದೆ. ಜೀವನ ಮೌಲ್ಯಗಳನ್ನು ಬೋಧಿಸುವುದರ ಜೊತೆಗೆ ಹೃದಯ ಸಂಸ್ಕಾರಕ್ಕೆ ಕಾರಣವಾಗುತ್ತದೆ ತಾಳಮದ್ದಳೆ ಕಲಾವಿದ ಬಿ.ವಿಶ್ವೇಶ್ವರ ಅಡಿಗ ಹೇಳಿದರು.

ಜಿಲ್ಲಾ ಜಾನಪದ ಪರಿಷತ್ತು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ಥಳೀಯ ಕಲಾ ವೇದಿಕೆ `ರಂಗಸ್ಥಳ~ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಈಚೆಗೆ ಆರಂಭವಾದ ತಾಳಮದ್ದಳೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ಯಕ್ಷಗಾನ ಭಾಷಾ ಪ್ರೌಢಿಮೆಯನ್ನು ಕಲಿಸುತ್ತದೆ. ಯಕ್ಷಗಾನದ ಒಂದು ಪ್ರಕಾರವಾದ ತಾಳಮದ್ದಳೆ ಈ ಕಾರ್ಯವನ್ನು ಸರಳವಾಗಿ ನಡೆಸುತ್ತದೆ. ಅದು ಸಂಸ್ಕೃತಿ ಶಿಕ್ಷಣದ ಪ್ರಬಲ ಮಾಧ್ಯಮ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಾನಪದ ಪರಿಷತ್ತಿನ ಅಧ್ಯಕ್ಷ ಯು.ಚಂದ್ರಶೇಖರ ಹೊಳ್ಳ ಪುರಾಣಗಳ ಓದು ಕಡಿಮೆಯಾಗಿರುವ ಈ ದಿನಗಳಲ್ಲಿ ಯಕ್ಷಗಾನ ಅದನ್ನು ಅನೌಪಚಾರಿಕವಾಗಿ ಕಲಿಸುತ್ತದೆ ಎಂದು ಹೇಳಿದರು.

ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್, ನಿವೃತ್ತ ಉಪನ್ಯಾಸಕ ಬಿ.ಹೊನ್ನ, ಜಯರಾಮ ಶೆಟ್ಟಿ ಅತಿಥಿಗಳಾಗಿದ್ದರು. ತಾಲ್ಲೂಕು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಯು.ಸಂದೇಶ ಭಟ್ ಸ್ವಾಗತಿಸಿದರು. ಸುಮಾ ಉಪ್ಪುಂದ ವಂದಿಸಿದರು. ನಾಗರಾಜ ಭಟ್ ನಿರೂಪಿಸಿದರು.

ಉದ್ಘಾಟನೆಯ ಬಳಿಕ ನಡೆದ ಸರಣಿಯ ಮೊದಲ ತಾಳಮದ್ದಳೆಯಲ್ಲಿ ಬಿ. ವಿಶ್ವೇಶ್ವರ ಅಡಿಗ, ಎಸ್. ಚಿಕ್ಕು ಪೂಜಾರಿ, ಯು. ಮಂಜುನಾಥ ಭಟ್, ಡಾ. ಸುಬ್ರಹ್ಮಣ್ಯ ಭಟ್, ಯು. ಸಂದೇಶ ಭಟ್, ಟಿ. ಆರ್. ಸಾಮಗ, ಯು. ರಮೇಶ ಭಟ್, ಯು. ಎಚ್.ರಾಜಾರಾಮ ಭಟ್, ನಾರಾಯಣ ಮಯ್ಯ, ವಿಠಲ ನಾರ್ಕಳಿ ಪಾತ್ರ ನಿರ್ವಹಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.